ADVERTISEMENT

ಲಕ್ಷಾಂತರ ಮಹಿಳೆಯರ ಕನಸು ನನಸಾಗಿಸಿದ ‘ಶಕ್ತಿ’ ಯೋಜನೆ

ಗದಗ ಬಸ್ ನಿಲ್ದಾಣಗಳಲ್ಲಿ ಸಂಭ್ರಮೋತ್ಸವ: ಬಿ.ಬಿ.ಅಸೂಟಿ‌, ಅಶೋಕ ಮಂದಾಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:45 IST
Last Updated 15 ಜುಲೈ 2025, 6:45 IST
ಗದಗ ನಗರದ ಪಂಡಿತ್‌ ಪುಟ್ಟರಾಜ ಗವಾಯಿಗಳ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು
ಗದಗ ನಗರದ ಪಂಡಿತ್‌ ಪುಟ್ಟರಾಜ ಗವಾಯಿಗಳ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು   

ಗದಗ: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಯೋಜನೆ ಶಕ್ತಿ ಯೋಜನೆ ಹೆಚ್ಚು ಜನಪ್ರಿಯವಾಗಿದೆ’ ಎಂದು‌ ಜಿಲ್ಲಾ‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ‌ ಹೇಳಿದರು.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ ಸಂಭ್ರಮದ ಹಿನ್ನೆಯಲ್ಲಿ‌ ಗದಗ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಮಾಡಿ, ಸಿಹಿ ವಿತರಣೆ ಮಾಡಿ ಮಾತನಾಡಿದರು.

‘ರಾಜ್ಯದಾದ್ಯಂತ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ವಿವಿಧೆಡೆ ಆಯೋಜನೆ ಮಾಡಲಾಗಿದೆ. ಈ ಯೋಜನೆ ಯಶಸ್ವಿಯಾಗಲು ಸರ್ಕಾರದ ಜತೆಗೆ ಸಾರಿಗೆ ಇಲಾಖೆಯ ಸಿಬ್ಬಂದಿಯ ಕಾರ್ಯ ಕೂಡ ಪ್ರಮುಖವಾಗಿದೆ’ ಎಂದರು.

ADVERTISEMENT

ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಸ್ವತಂತ್ರವಾಗಿ ರಾಜ್ಯದ ಎಲ್ಲಡೆ ಉಚಿತ ಪ್ರಯಾಣಿಸಲು ಅನುಕೂಲವಾಗಿದೆ. ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಮಹಿಳೆಯರು ಶಕ್ತಿ ಯೋಜನೆಯ ನೆರವಿನಿಂದ ರಾಜ್ಯ ಸುತ್ತಿ ನಮ್ಮ ಐತಿಹಾಸಿಕ ಪರಂಪರೆ, ಇತಿಹಾಸ, ಸಂಸ್ಕೃತಿ ನೋಡಿ ಆನಂದಿಸಿದ್ದಾರೆ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರ  ಕಾರ್ಯವೈಖರಿ ಮತ್ತು ಸಹಕಾರದಿಂದ ಯಶ್ವಸಿಯಾಗಿದೆ’ ಎಂದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರ್ ಸಾಬ್ ಕೌತಾಳ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜ, ವಿಭಾಗೀಯ ಸಂಚಲನಾಧಿಕಾರಿ ಪಿ.ವೈ.ಮೇತ್ರಿ, ಡಿಪೊ ವ್ಯವಸ್ಥಾಪಕ ಬಿ.ಎಲ್.ಗೆಣ್ಣೂರ, ನಿಯಂತ್ರಕರಾದ ವೆಂಕಟೇಶ್ ಜಾಧವ, ಶಿವಾನಂದ ಸಂಗಣ್ಣನವರ, ಎಂ.ಬಿ.ಪಾಟೀಲ ಇದ್ದರು.

ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಸಿಹಿ ಹಂಚಿಕೆ

ಗದಗ: ‘ಶಕ್ತಿ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರ ಕನಸುಗಳನ್ನು ನನಸಾಗಿಸಿ ಅವರ ಬದುಕಿಗೆ ಶಕ್ತಿ ತುಂಬಿದೆ’ ಎಂದು ಗದಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು. ನಗರದ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ ಮಾತನಾಡಿದರು. ‘ನಾಡಿನ ಹೆಣ್ಣುಮಕ್ಕಳು ಉದ್ಯೋಗ ಶಿಕ್ಷಣ ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಹೆಮ್ಮೆಯಿದೆ’ ಎಂದರು. ಗದಗ ತಾಲ್ಲೂಕು ಸಾರಿಗೆ ಘಟಕದಲ್ಲಿ 831378 ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸುವ ಮೂಲಕ ದಾಖಲೆಯ 253.28 ಲಕ್ಷ ಟಿಕೆಟ್ ಮೊತ್ತದ ಪ್ರಯಾಣ ಮಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.