ADVERTISEMENT

ಸಿಡಿಲು ಹೊಡೆತಕ್ಕೆ ಮೂರು ಜನ ಸಾವು

ಇತರೆ ಏಳು ಮಂದಿಗೆ ಗಾಯ: ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 16:14 IST
Last Updated 24 ಏಪ್ರಿಲ್ 2021, 16:14 IST
ಸಿಡಿಲು ಬಡಿದು ಸಾವಿಗೀಡಾಗಿರುವ ವ್ಯಕ್ತಿ
ಸಿಡಿಲು ಬಡಿದು ಸಾವಿಗೀಡಾಗಿರುವ ವ್ಯಕ್ತಿ   

ಬೆಂಗಳೂರು: ಪ್ರತ್ಯೇಕ ಘಟನೆಗಳಲ್ಲಿ ರಾಜ್ಯದಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ವಿಜಯನಗರ, ಶಿವಮೊಗ್ಗ,ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಸಿಡಿಲು ಹೊಡೆತಕ್ಕೆ ಇಬ್ಬರು ಸ್ಥಳದಲ್ಲಿ, ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಮಾರುತಿ ಗೋಶಲಣವರ (48), ಶರಣಪ್ಪ ಅಡವಿ (35) ಮತ್ತು ಕುಮಾರ ಮಾದರ (25)ಮೃತಪಟ್ಟವರು.

ಪರಶುರಾಮ (22), ಪ್ರವೀಣ (30), ಲಕ್ಷ್ಮಣ (30), ದುರಗಪ್ಪ (35) ಗಾಯಗೊಂಡಿದ್ದು, ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಂಬಳ ಹೋಬಳಿಯ ಡೊಣಿ ಗ್ರಾಮದ ಮಹಾಂತೇಶ ಹಣಜಿ ಅವರ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿಯಿತು. ಜಿಲ್ಲೆಯ ವಿವಿಧೆಡೆ ಸಿಡಿಲು, ಗುಡುಗ ಸಮೇತ ಉತ್ತಮ ಮಳೆಯಾಗಿದೆ.

ADVERTISEMENT

ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ಹಾಡುಗಾರ ಹೊಳೆಮಕ್ಕಿಯಲ್ಲಿ ಸಿಡಿಲು ಬಡಿದು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಇಬ್ಬರನ್ನು ಜಯಪುರ ಸರ್ಕಾರಿ ಆಸ್ಪತ್ರೆಗೆ ಹಾಗೂ ಒಬ್ಬ ಮಹಿಳೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ಬಾಳೆಹೊನ್ನೂರು, ಕಳಸ, ಕೊಪ್ಪದಲ್ಲಿ ಮಳೆಯಾಗಿದೆ. ಬಾಳೆಹೊನ್ನೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸುತ್ತ ಗುಡುಗು, ಸಿಡಿಲಿನೊಂದಿಗೆ ಮಳೆಯಾಗಿದೆ.

ಸಿಡಿಲಿಗೆ ಎಮ್ಮೆ ಬಲಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಶನಿವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಯಿಂದ 10ಕ್ಕೂ ಹೆಚ್ಚು ಮನೆಗಳ ತಗಡಿನ ಚಾವಣಿಗಳು ಹಾರಿ ಹೋಗಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ತೊಗರಿಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯೆ ರುಕ್ಮಿಣಮ್ಮ ಅವರ ಮನೆಯ ಚಾವಣಿ ಹಾರಿದ್ದು ಅದರ ಮೇಲಿದ್ದ ಕಲ್ಲು ಬೆನ್ನಿಗೆ ಬಿದ್ದು ರುಕ್ಮಿಣಮ್ಮ ಗಾಯಗೊಂಡರು. ಬಂಡ್ರಿ ಗ್ರಾಮದಲ್ಲಿ ಮನೆ ಗೋಡೆಗಳು ಕುಸಿದೆ. ಕಲ್ಲು ಬಿದ್ದು ಕುಂಬಾರ ಗಂಗಮ್ಮ ಅವರ ತಲೆಗೆ ಪೆಟ್ಟು ಬಿದ್ದಿದೆ.

ಅರಸೀಕೆರೆ ಹೋಬಳಿಯ ಹಿರೇಮೆಗಳಗೆರೆ ವ್ಯಾಪ್ತಿಯಲ್ಲಿ ಶನಿವಾರ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಸಿಡಿಲಿಗೆ ಎಮ್ಮೆ ಬಲಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲ್ಲೂಕಿನಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕೋಣಂದೂರಿನಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಭರಮಗಿರಿಯಲ್ಲಿ ಶುಕ್ರವಾರ ರಾತ್ರಿ ಅಪ್ಪಳಿಸಿದ ಸಿಡಿಲಿಗೆ ಹೋರಿ ಮತ್ತು ಹಸು ಮೃತಪಟ್ಟಿದೆ. ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಜ್ಜನಕಪಿಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದೆ. ಉತ್ತರ ಕನ್ನಡದ ಸಿದ್ದಾಪುರದಲ್ಲಿಯೂ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.