ನರಗುಂದ: ಗಣೇಶ, ಭಾರತೀಯ ಸಂಸ್ಕೃತಿಯಲ್ಲಿ ಒಂದು ವಿಶಿಷ್ಟ, ವೈವಿಧ್ಯಮಯ ದೈವ. ಆತನ ರೂಪಗಳು ಕೂಡಾ ನಾನಾ ಬಗೆ ಅಂತಹ ಗಣೇಶನನ್ನು ಸ್ವಾಗತಿಸಲು ನಾ ಮುಂದು, ತಾ ಮುಂದು ಎಂದು ಎಲ್ಲರೂ ಹೊಸ, ಹೊಸ ಅಲಂಕಾರ ಮಾಡುತ್ತಲೇ ಇರುತ್ತಾರೆ. ಇದರ ಸಾಲಿಗೆ ಶಿರೋಳದ ಡಾ.ವೀರಣ್ಣ ಬ್ಯಾಳಿ ಕೂಡಾ ಒಬ್ಬರು.
ನೇತ್ರ ವೈದ್ಯರಾದ ಡಾ.ವೀರಣ್ಣ ಬೃಹತ್ ತಿರುಪತಿ ವೆಂಕಟೇಶ್ವರ ಮಾದರಿಯ ಪರಿಸರ ಸ್ನೇಹಿ ಗಣಪತಿಯನ್ನು ಮಣ್ಣಿನಿಂದ ತಯಾರಿಸಿ ತಮ್ಮ ವಾಸಂತಿ ನೇತ್ರಾಲಯದಲ್ಲಿ ಪ್ರತಿಷ್ಠಾಪಿಸಿ ಜನರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ.
ಬಾಲ್ಯದಿಂದಲೂ ಗಣಪತಿ ತಯಾರಿಸುವ ಆಸಕ್ತಿ ಬೆಳೆಸಿಕೊಂಡಿರುವ ಅವರು, ಪ್ರತಿವರ್ಷ ವಿಶಿಷ್ಟವಾದ ಗಣೇಶನನ್ನು ತಯಾರಿಸಿ ಪ್ರತಿಷ್ಠಾಪಿಸಿ ಜನಮನ ಸೆಳೆದಿದ್ದಾರೆ.
‘ವಾತಾಪಿ ಗಣಪತಿಯಿಂ ಭಜೆ’ ಎಂಬ ಶಾಸನದ ಉಕ್ತಿ ಬಾದಾಮಿಯ ಮೇಣಬಸೀದಿಯಲ್ಲಿ ಸಿಗುತ್ತದೆ. ಜಗತ್ತಿನ ಎಲ್ಲ ಶ್ರೇಷ್ಠ ಭಾರತೀಯ ಸಂಗೀತಗಾರರು ಗಣಪತಿಯ ಸ್ತುತಿಯನ್ನು ‘ವಾತಾಪಿ ಗಣಪತಿಯಿಂ ಭಜೆ’ ಎಂದೇ ಆರಂಭಿಸಿ ಬಾದಾಮಿಯ ಗಣಪತಿಗೆ ನಮನ ಸಲ್ಲಿಸುತ್ತಾರೆ. ಮೂಲತಃ ಅದೇ ತಾಲ್ಲೂಕಿನ ಹೆಬ್ಬಳ ಗ್ರಾಮದವರಾದ ವೀರಣ್ಣ ನೇತ್ರ ತಜ್ಞರೂ ಕೂಡಾ.
ಮೂರ್ತಿ ತಯಾರಿಕೆಗೆ ಉತ್ತಮವಾದ ಮಣ್ಣು, ವಿಭೂತಿ, ಚಂದನ, ಹಳದಿ ಮಿಶ್ರಣ ಮಾಡಿ ತಿರುಪತಿ ವೆಂಕಟೇಶ್ವರನ ಮೂರ್ತಿ ಮಾಡಿ ಗಣಪತಿ ಕಣ್ಣುಗಳನ್ನು ಕೃತಕ ಮಸೂರಗಳಿಂದ, ಕೋರೆಯನ್ನು ಬಿಳಿ ಎಕ್ಕೆಯ ಬೇರಿನಿಂದ ಅಲಂಕರಿಸಿ ಹೊಳೆಯುವಂತೆ ಮಾಡಿದ್ದಾರೆ.
ಆಪರೇಶನ್ ಸಿಂಧೂರ ನೆನಪಿಗೆ ರಕ್ಷಣೆಯ ಬ್ರಹ್ಮೋಸ್ ಕ್ಷಿಪಣಿ, ಶಿವನ ಹೊತ್ತ ಬಸವಣ್ಣ, ಕರಿ ಬಿಳಿ ರೂಪದ ಆದಿ ಮಾನವನ ವಿಶೇಷ ಮೂರ್ತಿ ಸ್ಥಾಪನೆ ಮಾಡಿ, ಪಿಒಪಿ ಗಣಪತಿಗೆ ಸೊಡ್ಡು ಹೊಡೆಯುವಂತೆ ತಯಾರಿಸಿದ್ದಾರೆ.
ನೈಜ ಸಾಂಪ್ರದಾಯಿಕದ ಜೊತೆಗೆ ವೈಚಾರಿಕತೆ ಮೂಡಿಸುವ ಈ ಗಣೇಶ ನಿರ್ಮಾಣದ ಕಲೆಯನ್ನು ಕಲಾತ್ಮಕವಾಗಿ ರೂಢಿಸಿಕೊಂಡಿರುವ ಅವರ ಸಾಹಸ ಮೆಚ್ಚುಗೆ ಗಳಿಸಿದೆ. ಗಣಪನಿಗೆ ಹಾಕಿದ ತುಳಸಿ ಮಾಲೆ ಪ್ಲಾಸ್ಟಿಕ್ ಹೂಮಾಲೆಗಳಿಗಿಂತ ಆಕರ್ಷಕವಾಗಿ ಕಾಣಿಸುತ್ತಿದೆ.
ಅವರ ಈ ವಿಶಿಷ್ಟ ಗಣೇಶನ ನಿರ್ಮಾಣಕ್ಕೆ ಕಲಾವಿದ ಬಸವರಾಜ ಗಾಣಿಗೇರ ಕೂಡಾ ಸಹಕಾರ ನೀಡಿದ್ದಾರೆ ಎಂದು ಶಿರೋಳದ ವಾಸಂತಿ ಐ ಕೇರ್‌ನ ವೈದ್ಯ ಡಾ.ವೀರಣ್ಣ ಬ್ಯಾಳಿ ಸ್ಮರಿಸುತ್ತಾರೆ.
ಬಣ್ಣದ ಗಣಪತಿ ಪ್ರತಿಷ್ಠಾಪನೆ ನಿಲ್ಲಬೇಕು. ಜಲಮೂಲಗಳ ರಕ್ಷಣೆ ಜೊತೆಗೆ ಪರಿಸರ ಗಣೇಶನ ಮೂರ್ತಿಗಳನ್ನು ನಿರ್ಮಿಸಿಡಾ.ವೀರಣ್ಣ ಬ್ಯಾಳಿ ನೇತ್ರ ತಜ್ಞ ಶಿರೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.