ADVERTISEMENT

ಡಂಬಳ | ತೋಂಟದಾರ್ಯ ಮಠ: ಜಾತ್ರೆ ಇಂದಿನಿಂದ

ಭಾವೈಕ್ಯಕ್ಕೆ ಹೆಸರಾದ ರೊಟ್ಟಿ ಜಾತ್ರೆ, ಸಾವಿರಾರು ಜನರು ಭಾಗಿ

ಕಾಶಿನಾಥ ಬಿಳಿಮಗ್ಗದ
Published 13 ಫೆಬ್ರುವರಿ 2025, 6:53 IST
Last Updated 13 ಫೆಬ್ರುವರಿ 2025, 6:53 IST
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಗೆ ಸಿದ್ಧಪಡಿಸಿರುವ ರೊಟ್ಟಿಗಳನ್ನು ಜಾತ್ರಾ ಸಮಿತಿ ಪದಾಧಿಕಾರಿಗಳು ತೋರಿಸಿದರು
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಗೆ ಸಿದ್ಧಪಡಿಸಿರುವ ರೊಟ್ಟಿಗಳನ್ನು ಜಾತ್ರಾ ಸಮಿತಿ ಪದಾಧಿಕಾರಿಗಳು ತೋರಿಸಿದರು   

ಮುಂಡರಗಿ: ಸಮ ಸಮಾಜ ನಿರ್ಮಾಣದ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ರೂಪಗೊಂಡಿರುವ ತಾಲ್ಲೂಕಿನ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠವು ಮೂಢ ನಂಬಿಕೆ, ಕಂದಾಚಾರ, ಅಸ್ಪೃಶ್ಯತೆ ಮೊದಲಾದ ಅನಿಷ್ಟ ಅಚರಣೆಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ.

ಹಲವು ಪ್ರಗತಿಪರ ಚಿಂತನೆ ಹಾಗೂ ಹೋರಾಟಗಳ ಮೂಲಕ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠದ ಕೀರ್ತಿಯನ್ನು ದೆಹಲಿಯವರೆಗೆ ಪಸರಿಸಿದ ಕೀರ್ತಿ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗೆ ಸಲ್ಲುತ್ತದೆ. ಅವರ ತತ್ವಾದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಈಗಿನ ಪೀಠಾಧಿಪತಿ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಅವರು ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮಠದ 285ನೇ ಜಾತ್ರೆಯು ಇಂದಿನಿಂದ (ಫೆ.13) ಜರುಗಲಿದ್ದು, ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT

ರೊಟ್ಟಿ ಜಾತ್ರೆಯು ಈ ಮಠದ ಜಾತ್ರೆಯ ಮಹತ್ವದ ಆಚರಣೆಯಾಗಿದ್ದು, ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಸಡಗರದಿಂದ ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತಿ, ಮತ, ಪಂಥಗಳ ಭೇದವನ್ನು ಬದಿಗೊತ್ತಿ, ಸಾಮೂಹಿಕವಾಗಿ ರೊಟ್ಟಯೂಟ ಸವಿಯುತ್ತಾರೆ.

ರೊಟ್ಟಿ ಜಾತ್ರೆಗಾಗಿ 25 ಕ್ವಿಂಟಲ್ ಬಿಳಿಜೋಳದಿಂದ ಸುಮಾರು 60 ಸಾವಿರ ರೊಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಬಿಳಿಜೋಳದ ಖಡಕ್ ರೊಟ್ಟಿ, ಮೊಳಕೆಯೊಡೆದ ಕಾಳುಗಳ ಪಲ್ಯ, ಗರಗಟ ಹಾಗೂ ಸವತೆಕಾಯಿ, ಗಜ್ಜರಿ, ಹಸಿಮೆಣಸಿನಕಾಯಿ, ಅಗಸೆ, ಅರಿಸಿಣ ಮೊದಲಾದವುಗಳಿಂದ ವಿಶೇಷವಾಗಿ ತಯಾರಿಸುವ ಕರಿಹಿಂಡಿಯು ರೊಟ್ಟಿಜಾತ್ರೆಯ ಆಕರ್ಷಣೆ. ಕರಿಹಿಂಡಿಯೊಂದಿಗೆ ರೊಟ್ಟಿಯೂಟ ಸವಿಯುವುದಕ್ಕಾಗಿಯೇ ಅಕ್ಕಪಕ್ಕದ ಸಾವಿರಾರು ಭಕ್ತರು ಜಾತ್ರೆಗೆ ಬರುತ್ತಾರೆ.

‘ಸಿದ್ಧರಾಮ ಮಹಾಸ್ವಾಮೀಜಿ ಹಾಗೂ ಗ್ರಾಮಗಳ ಹಿರಿಯರ ಸಲಹೆ ಹಾಗೂ ಮಾರ್ಗದರ್ಶನದಂತೆ ಜಾತ್ರೆ ಆರಂಭಕ್ಕೂ ಮುನ್ನ ಹಾಲುಹುಗ್ಗಿ ವಿತರಣೆ ಸೇರಿದಂತೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಜಾತ್ರೆ ಸಂಪನ್ನವಾಗುವವರೆಗೂ ನಿತ್ಯ ದಾಸೋಹ ಇರಲಿದೆ. ಜಾತ್ರಾ ಕಮಿಟಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಒಂದು ತಿಂಗಳಿಂದ ಅದ್ದೂರಿ ಜಾತ್ರಾ ಮಹೋತ್ಸವದ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಭೀಮಪ್ಪ ಗದಗಿನ ಮಾಹಿತಿ ನೀಡಿದರು.

ಗ್ರಾಮದಲ್ಲಿ ನಡೆಯುವ ರೊಟ್ಟಿ ಜಾತ್ರೆಯು ತುಂಬ ಪ್ರಸಿದ್ಧವಾಗಿದ್ದು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲಿದೆ. ರೊಟ್ಟಿ ಜಾತ್ರೆಯಿಂದ ನಮ್ಮ ಗ್ರಾಮದ ಕೀರ್ತಿ ಹೆಚ್ಚಿದೆ.
–ಭೀಮಪ್ಪ, ಗದಗಿನ ಜಾತ್ರಾ ಕಮಿಟಿ ಅಧ್ಯಕ್ಷ ಡಂಬಳ

ಮಹಾರಥೋತ್ಸವ ಇಂದು

ಫೆ.13ರಂದು ಸಂಜೆ 6.30ಕ್ಕೆ ಮಹಾರಥೋತ್ಸವ ಜರುಗಲಿದೆ. ಸಂಜೆ 7.30ಕ್ಕೆ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಅದ್ದೂರಿ ಸಮಾರಂಭ ನಡೆಯಲಿದೆ. ಶಾಸಕ ಜಿ.ಎಸ್. ಪಾಟೀಲ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 14ರಂದು ಸಂಜೆ 4.30ಕ್ಕೆ ಲಘು ರಥೋತ್ಸವ 6.30ಕ್ಕೆ ಸಾಂಸ್ಕೃತಿಕ ಸಮಾರಂಭ ಜರುಗಲಿದೆ. ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಕಳಕಪ್ಪ ಬಂಡಿ ಎಸ್.ವಿ. ಸಂಕನೂರ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರೊಟ್ಟಿಜಾತ್ರೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.