ADVERTISEMENT

ಬೀಜೋತ್ಪಾದನೆ: ಶೇ 15ರಷ್ಟು ಹೆಚ್ಚು ಬೆಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 16:32 IST
Last Updated 23 ಸೆಪ್ಟೆಂಬರ್ 2020, 16:32 IST
ಜಿಲ್ಲೆಯ ರೈತರಿಗಾಗಿ ಬೀಜೋತ್ಪಾದನೆ ಕುರಿತಾದ ತರಬೇತಿ ಕಾರ್ಯಕ್ರಮ ನಡೆಯಿತು
ಜಿಲ್ಲೆಯ ರೈತರಿಗಾಗಿ ಬೀಜೋತ್ಪಾದನೆ ಕುರಿತಾದ ತರಬೇತಿ ಕಾರ್ಯಕ್ರಮ ನಡೆಯಿತು   

ಗದಗ: ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ನರೇಗಲ್‌ನ ಕೃಷಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಆಶ್ರಯದಲ್ಲಿ ರೋಣ ತಾಲ್ಲೂಕಿನ ಜಕ್ಕಲಿ ಹಾಗೂ ನಿಡಗುಂದಿ ಗ್ರಾಮಗಳಲ್ಲಿ ಬೀಜೋತ್ಪಾದನೆ ಕುರಿತಾದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎನ್‍ಎಸ್‍ಸಿಯ ವಲಯ ವ್ಯವಸ್ಥಾಪಕಿ ಎಂ.ಎಸ್.ಅಂಜಲಿ ಮಾತನಾಡಿ, ‘ಯಾಂತ್ರಿಕ ಕಟಾವಿಗೆ ಸೂಕ್ತವಾದ ಹಿಂಗಾರಿ ಕಡಲೆಯ ನೂತನ ತಳಿ ಎನ್‍ಬಿಇಜಿ-47ಗೆ ಗದಗ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇದೆ. ಆದ್ದರಿಂದ ರೈತರು ಈ ವರ್ಷ ಬೀಜೋತ್ಪಾದನೆಗೆ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

‘ರೈತರು ಬೀಜೋತ್ಪಾದನೆ ಮಾಡಿದರೆ ಮಾರುಕಟ್ಟೆ ದರಕ್ಕಿಂತ ಶೇ 15ರಷ್ಟು ಹೆಚ್ಚು ಬೆಲೆ ಕೊಡಲಾಗುವುದು. ಇದರಿಂದ ರೈತರಿಗೆ ಆರ್ಥಿಕವಾಗಿ ಲಾಭವಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾ ಕೃಷಿ ವಿಸ್ತರಣಾಧಿಕಾರಿ ಡಾ. ಸಿ.ಎಂ.ರಫಿ, ನೂತನ ತಳಿ ಎನ್‍ಬಿಇಜಿ-47ರ ವೈಜ್ಞಾನಿಕ ಸಾಗುವಳಿ ಕ್ರಮಗಳು ಹಾಗೂ ಕಡಲೆಯಲ್ಲಿ ಬರುವ ಕೀಟ ಹಾಗೂ ರೋಗ ಹತೋಟಿ ಕುರಿತು ಸಮಗ್ರ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಬೀಜ ನಿಗಮದ ಸಹಾಯಕ ನಿರ್ದೇಶಕ ಜಗದೀಶ ರೆಡ್ಡಿ ಅವರು ನಿಗಮದಿಂದ ಕೈಗೊಳ್ಳುವ ಬೀಜೋತ್ಪಾದನೆ ಹಾಗೂ ಖರೀದಿ ಕುರಿತು ಮಾಹಿತಿ ನೀಡಿದರು.

ಹಾವೇರಿಯ ಎನ್‍ಎಸ್‍ಸಿ ಅಧಿಕಾರಿಗಳಾದ ಫೈರೋಜ್, ಮೇಘನಾ ರೈತರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದರು.

ನರೇಗಲ್‌ನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಇಲಾಖೆಯಿಂದ ಈ ಹಿಂಗಾರು ಹಂಗಾಮಿಗೆ ದೊರೆಯುವ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿದರು.

‌ಜಕ್ಕಲಿ ಗ್ರಾಮದ ಹಿರಿಯರಾದ ವೀರಪ್ಪ ಪಟ್ಟಣಶೆಟ್ಟಿ, ಚೆನ್ನಬಸಪ್ಪ ಜ್ಞಾನದೇವ ದೊಡ್ಡಮೇಟಿ, ಅಶೋಕ ಅಯ್ಯಪ್ಪ ಕಡಗದ, ಮಹೇಶ ಕೋರಿ, ಮುತ್ತಪ್ಪ ತೋಟಪ್ಪ ಕಡಗದ, ಅಂದಾನಗೌಡ ಬ. ಪಾಟೀಲ, ಮಲ್ಲಪ್ಪ ಕುರಡಗಿ ಸೇರಿದಂತೆ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.