ADVERTISEMENT

ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ; ಶಿವಲಿಂಗಪ್ಪ ಬೋಪಳಾಪುರ

ಭಾರತ– ಅಮೆರಿಕ ಒಪ್ಪಂದ ರದ್ದುಗೊಳಿಸಿ: ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:40 IST
Last Updated 19 ಫೆಬ್ರುವರಿ 2026, 5:40 IST
ಶಿವಲಿಂಗಪ್ಪ ಬೋಪಳಾಪುರ
ಶಿವಲಿಂಗಪ್ಪ ಬೋಪಳಾಪುರ   

ಗದಗ: ‘ಕೃಷಿ ಉತ್ಪನ್ನಗಳ ಆಮದು ಕುರಿತಾದ ಭಾರತ-ಅಮೆರಿಕ ಒಪ್ಪಂದವನ್ನು ರೈತ ಸಂಘ ವಿರೋಧಿಸುತ್ತದೆ. ಇದು ಅನುಷ್ಠಾನಕ್ಕೆ ಬಂದರೆ ದೇಶದ ರೈತರು ಬೀದಿಗೆ ಬೀಳಲಿದ್ದಾರೆ’ ಎಂದು ರೈತ ಮುಖಂಡ ಶಿವಲಿಂಗಪ್ಪ ಬೋಪಳಾಪುರ ಆತಂಕ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಆತ್ಮನಿರ್ಭರ ಅಂತ ಹೇಳುತ್ತದೆ. ಆತ್ಮನಿರ್ಭರ ಅಂದರೆ ಸ್ವಾವಲಂಬಿ ಆಗುವುದಾಗಿದೆ. ಪ್ರಧಾನಿ ಮೋದಿ ಅವರು ‘ವೋಕಲ್‌ ಫಾರ್‌ ಲೋಕಲ್‌’ ಮಂತ್ರ ಹೇಳಿದ್ದರು. ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಆದರೆ, ಈಗ ಅಮೆರಿಕದ ಜತೆಗೆ ಒಪ್ಪಂದ ಮಾಡಿಕೊಳ್ಳುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘1947ರಿಂದ ಇಲ್ಲೀವರೆಗೆ ಸಾಕಷ್ಟು ಪಕ್ಷಗಳು ದೇಶದಲ್ಲಿ ಆಡಳಿತ ನಡೆಸಿವೆ. 60 ವರ್ಷಗಳ ಕಾಲ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಈಗ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಇವರು ರೈತರ ಪರವಾಗಿ ನಿಲ್ಲುವುದು ಬಿಟ್ಟು ಡೊನಾಲ್ಡ್‌ ಟ್ರಂಪ್‌ ಮುಂದೆ ಕೈಕಟ್ಟಿ ನಿಲ್ಲುವುದು ಸರಿಯಲ್ಲ’ ಎಂದು ಖಂಡಿಸಿದರು.

ADVERTISEMENT

‘ಕೇಂದ್ರ ಸರ್ಕಾರವೇ ಟ್ರಂಪ್‌ ಪರವಾಗಿ ನಿಂತರೆ; ರೈತರ ಪರ ನಿಲ್ಲುವವರು ಯಾರು? ಸ್ವಾವಲಂಬಿ ಭಾರತ ಆಗಬೇಕಾದರೆ, ಇಲ್ಲಿ ಉತ್ಪಾದನೆ ಆಗುವ ರೈತರ ಬೆಳೆಗಳಿಗೆ ಆದ್ಯತೆ ಕೊಡಬೇಕು. ಅಭಿವೃದ್ಧಿಶೀಲ ಭಾರತ ಈಗ ಯಾವುದೇ ದೇಶಕ್ಕೂ ಕಡಿಮೆ ಇಲ್ಲ. ಯಾರ ಮುಂದೆಯೂ ಕೈಕಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ. ಬೇರೆ ದೇಶಗಳಿಂದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಸರಿಯಲ್ಲ. ವಿರೋಧಪಕ್ಷದವರು ಹಾಗೂ ರೈತರ ಜತೆಗೆ ಚರ್ಚೆ ಮಾಡದೇ ಕಾನೂನು ತರುವುದು ಸರಿಯಲ್ಲ. ಅವರ ಜತೆಗೆ ಚರ್ಚಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ’ ಎಂದರು.

‘ರೈತರು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ. ಇನ್ನು ಅಮೆರಿಕದಿಂದ ಆಮದು ಆದರೆ ಕೇಳುವ ಹಕ್ಕನ್ನೂ ಕಳೆದುಕೊಳ್ಳುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕಾರಣಿಗಳು ರಾಜಕಾರಣ ಮಾಡಿದರೆ ರೈತರ ಅಭ್ಯಂತರ ಇಲ್ಲ. ಆದರೆ, ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುವುದನ್ನು ನಾವು ಒಪ್ಪುವುದಿಲ್ಲ. ರೈತ ಸಂಘಟನೆಗೆ ಬರುವುದಾದರೆ, ರಾಜಕೀಯ ತೊರೆದು ನಮ್ಮ ಹೋರಾಟಕ್ಕೆ ಬರಲಿ ಎಂದು ಆಗ್ರಹಿಸಿದರು.

‘ರೈತರಿಗೆ ಸಾಲ ಕೊಡುವುದರಿಂದ ಬ್ಯಾಂಕ್‌ಗಳು ನಷ್ಟಕ್ಕೆ ಸಿಲುಕುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವ ಬ್ಯಾಂಕ್‌ ನಷ್ಟ ಹೊಂದಿದೆಯೋ ಹೇಳಲಿ; ಅವರಿಗೆ ನಷ್ಟ ತುಂಬಿಕೊಡಲು ರೈತರು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಬ್ಯಾಂಕ್‌ಗಳ ₹6.10 ಲಕ್ಷ ಕೋಟಿ ಹಣವನ್ನು ಮನ್ನಾ ಮಾಡಿದೆ. ಇದು ಜನರ ತೆರಿಗೆ ಹಣ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಸಿಎಂ ಸಿದ್ದರಾಮಯ್ಯ ಅವರು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಆರೋಪ ಮಾಡಿದರು. ಎರಡೂ ಪಕ್ಷಗಳು ಒಬ್ಬರ ವಿರುದ್ಧ ಒಬ್ಬರು ಆರೋಪ ಮಾಡುತ್ತಿದ್ದಾರೆಯೋ ಹೊರತು ಯಾರೂ ಕೆಲಸ ಮಾಡುತ್ತಿಲ್ಲ. ನಿಮಗೆ ಅಧಿಕಾರ ಕೊಟ್ಟಿರುವುದು ಆರೋಪ ಮಾಡುವುದಕ್ಕಲ್ಲ. ಅವರು ಮಾಡಲು ಸಾಧ್ಯವಾಗದ ಕೆಲಸವನ್ನು ನೀವು ಮಾಡಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಮೇಘರಾಜ ಬಾವಿ, ಶಂಕ್ರಪ್ಪ, ಸಂಗಣ್ಣ, ಬಸವರಾಜ್‌, ಶಿವಲಿಂಗಪ್ಪ, ಹನುಮಪ್ಪ ರೋಣದ, ಚನ್ನಬಸಯ್ಯ ಚರಂತಿಮಠ, ಬಸವರಾಜ್‌ ಹೊಸಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.