ADVERTISEMENT

ಒಡೆದ ಮನಸ್ಸು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:05 IST
Last Updated 1 ಮಾರ್ಚ್ 2025, 14:05 IST
ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ರಂಭಾಪುರಿ ಲಿಂ. ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು
ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ರಂಭಾಪುರಿ ಲಿಂ. ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು   

ಲಕ್ಷ್ಮೇಶ್ವರ: ‘ಮಾನವೀಯತೆಯ ಆದರ್ಶ ಮೌಲ್ಯಗಳು ಬೆಳೆದು ಬರಬೇಕು. ಮಾನವೀಯತೆಯಲ್ಲಿ ನಂಬಿಕೆ, ವಿಶ್ವಾಸ ಯಾವತ್ತೂ ಕಳೆದುಕೊಳ್ಳಬಾರದು. ಮಾತು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮ‘ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಲಿಂ. ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

’ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಬಡಿದಾಡಿ ಸತ್ತವರು ಕೋಟಿ ಕೋಟಿ ಜನರಿದ್ದಾರೆ. ಆದರೆ, ಭಗವಂತನಿಗಾಗಿ ಹಂಬಲಿಸಿದವರು ಬಹಳಷ್ಟು ವಿರಳ. ಮಹಾನುಭಾವರಿಗೆ ಸತ್ಯವೇ ಸಂಪತ್ತು, ಧರ್ಮವೇ ಅವರ ಉಸಿರು. ಸತ್ಪುರುಷರು ಜ್ಞಾನ ಸುಧೆ ಹಂಚುವುದರ ಮೂಲಕ ಇತರರ ಬಾಳಿಗೆ ಬೆಳಕು ತೋರುತ್ತಾರೆ’ ಎಂದರು.

ADVERTISEMENT

‘ಶಿವರಾತ್ರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಲಿಂ. ರಂಭಾಪುರಿ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಹಮ್ಮಿಕೊಂಡಿರುವುದು ಸ್ತುತ್ಯ ಕಾರ್ಯ. ಅವರು 19 ವರ್ಷಗಳ ಕಾಲ ವೀರಶೈವ ಧರ್ಮ, ಸಂಸ್ಕೃತಿ, ಮಾನವ ಧರ್ಮದ ಹಿರಿಮೆಯನ್ನು ಬೋಧಿಸಿ ಉದ್ಧರಿಸಿದ್ದನ್ನು ಮರೆಯಲಾಗದು’ ಎಂದು ಸ್ಮರಿಸಿದರು.

ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್ವಕೆರೂರು ಸಿದ್ಧಲಿಂಗ ಶಿವಾಚಾರ್ಯರು, ಕಲಾದಗಿಯ ಗಂಗಾಧರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು ಪ್ರವಚನ ನೀಡಿದರು. ಗದಗಿನ ವೀರೇಶ ಕೂಗು, ದಾವಣಗೆರೆ ಚನಬಸಯ್ಯ ಹಿರೇಮಠ, ಚಂದ್ರಶೇಖರ ವಿಶ್ವನಾಥಯ್ಯ ಚಿಕ್ಕತೊಗಲೇರಿ, ವೀರಣ್ಣ ಪವಾಡದ, ಪಾಲಿಕೊಪ್ಪದ ಶಿವನಗೌಡ ಪಾಟೀಲ ಇದ್ದರು.

ಗಂಗಾಧರ ಹಿರೇಮಠ ಪ್ರಾರ್ಥನೆ ಹಾಡಿದರು. ಗುರುಪಾದಯ್ಯ ಸಾಲಿಮಠ ನಿರೂಪಣೆ ಮಾಡಿದರು. ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೌರಭ ನಡೆಯಿತು. ಸಮಾರಂಭಕ್ಕೂ ಮುನ್ನ ರಂಭಾಪುರಿ ಲಿಂ. ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ- ಕಡುಬಿನ ಕಾಳಗ ನೆರವೇರಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.