ADVERTISEMENT

ಮುಳಗುಂದ: ಆರು ವರ್ಷಗಳಿಂದ ತುಂಗಭದ್ರಾ ನದಿ ನೀರು ಸ್ಥಗಿತ

ಅಸಮರ್ಪಕ ನಿರ್ವಹಣೆ; ನೀರು ಪೂರೈಕೆ ಅಸ್ತವ್ಯಸ್ತ, ಹತ್ತು ದಿನಗಳಿಗೊಮ್ಮೆ ಕೊಳವೆಬಾವಿ ನೀರು

​ಪ್ರಜಾವಾಣಿ ವಾರ್ತೆ
Published 26 ಮೇ 2025, 4:37 IST
Last Updated 26 ಮೇ 2025, 4:37 IST
ಮುಳಗುಂದಕ್ಕೆ ನದಿ ನೀರು ಸರಬರಾಜು ಮಾಡುವ ಯಂತ್ರಗಳು ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿರುವುದು
ಮುಳಗುಂದಕ್ಕೆ ನದಿ ನೀರು ಸರಬರಾಜು ಮಾಡುವ ಯಂತ್ರಗಳು ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿರುವುದು   

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯು ಸಾರ್ವಜನಿಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ಪಟ್ಟಣದಲ್ಲಿ ನೀರಿನ ಹಾಹಾಕಾರ ತಲೆದೋರಿದೆ. ತುಂಗಭದ್ರಾ ನದಿ ನೀರು ಸಹ ಆರು ವರ್ಷಗಳಿಂದ ಬಂದ್ ಆಗಿದೆ.

ಪಟ್ಟಣದಲ್ಲಿ ಬಸಾಪುರ, ಶೀತಾಲಹರಿ ಒಳಗೊಂಡು ಒಟ್ಟು 19 ವಾರ್ಡ್‌ಗಳಿದ್ದು, ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿದೆ. ಈ ಹಿಂದೆಂದೂ ಕಂಡು ಕೇಳರಿಯದಂಥ ನೀರಿನ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

5-6 ವರ್ಷಗಳ ಹಿಂದೆ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು, ನಂತರ ನಾಲ್ಕು ದಿನಗಳಿಗೊಮ್ಮೆ ಸರದಿ ಪೂರೈಕೆ ಚಾಲ್ತಿಗೆ ತರಲಾಯಿತು. ಆದರೆ ಈಚಿನ ಕೆಲವು ತಿಂಗಳಿಂದ 10-12 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು, ಸಾರ್ವಜನಿಕರು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇಲ್ಲಿನ 19 ವಾರ್ಡ್‌ಗಳಿಗೆ ಕೊಳವೆಬಾವಿ ನೀರು ಮಾತ್ರ ಆಧಾರವಾಗಿದೆ. ಊರಿನ ಸುತ್ತಮುತ್ತಲಿರುವ ಸಿಹಿ ನೀರಿನ 36 ಕೊಳವೆಬಾವಿಗಳು ದಿನದ 24 ಗಂಟೆ ಶುರುವಿದ್ದರೂ ಪಟ್ಟಣದಲ್ಲಿ ನೀರಿನ ಬರ ಎದುರಾಗಿದೆ. ಮನೆಯಲ್ಲಿ ಎರಡು ಮೂರು ದಿನಗಳ ಬಳಕೆಗೆ ಆಗುವಷ್ಟು ನೀರು ಸಂಗ್ರಹ ಇರುತ್ತದೆ. ಆದರೆ, 10-12 ದಿನಗಳು ನೀರು ಬರದಿದ್ದರೆ ನಮ್ಮ ಗತಿ ದೇವರೇ ಬಲ್ಲ. ₹400 ಕೊಟ್ಟು ಟ್ಯಾಂಕರ್ ನೀರು ಕೊಳ್ಳುವಂತಾಗಿದೆ. ಸಮೀಪದಲ್ಲಿ ಬಾವಿ, ಕೆರೆ ಇಲ್ಲ. ಹೀಗಾಗಿ ನೀರು ಇಲ್ಲವಾದರೆ ನಾವು ಎಲ್ಲಿಗೆ ಹೋಗೋದು. ಸ್ಥಳಿಯ ಪಟ್ಟಣ ಪಂಚಾಯಿತಿ ನೀರು ಪೂರೈಕೆ ನಿರ್ವಹಣೆಯಲ್ಲಿ ಪದೆ ಪದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಹಾಂತೇಶ ಆಕ್ರೋಶ ವ್ಯಕ್ತಪಡಿಸಿದರು.

ಕೆಲವೊಮ್ಮೆ ನೀರು ಎತ್ತುವ ಯಂತ್ರಗಳು ಕೈ ಕೊಟ್ಟಾಗ, ಗಾಳಿ ಮಳೆಗೆ ರಾತ್ರಿ ವೇಳೆಗೆ ವಿದ್ಯುತ್ ಕಡಿತ ಮೇಲಿಂದ ಮೇಲೆ ಆಗುತ್ತಿದೆ. ಈ ಕಾರಣದಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ನೀರೆತ್ತುವ ಯಂತ್ರಗಳು ಬಂದ್ ಆಗುತ್ತಿವೆ ಎನ್ನುತ್ತಾರೆ ನೀರು ಪೂರೈಕೆ ಸಿಬ್ಬಂದಿ.

ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಹೆಚ್ಚುವರಿ ಯಂತ್ರಗಳನ್ನು ಸಂಗ್ರಹ ಮಾಡಿಕೊಂಡಿದ್ದೇವೆ. ಆದರೆ ನೀರಿನ ಸಂಪ್ ಇರುವ ಕಡೆ ವಿದ್ಯುತ್ ಸಂಪರ್ಕ ಕಡಿತವಾದಾಗ ಈ ರೀತಿ ಸಮಸ್ಯೆ ಆಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದ್ದಾರೆ.

ತುಂಗಭದ್ರಾ ನದಿ ನೀರು ಸ್ಥಗಿತ:

ಸುಮಾರು 60 ಕಿ.ಮೀ. ದೂರದ ಹೊಳೆ ಇಟಗಿ ಜಾಕ್‌ವೆಲ್ ಮೂಲಕ ಸರಬರಾಜು ಆಗುತ್ತಿದ್ದ ತುಂಗಭದ್ರಾ ನದಿ ನೀರು ಬಳಸುತ್ತಿರುವ ಗ್ರಾಮಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ನಿರ್ವಹಣೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ಕಳೆದ 6 ವರ್ಷಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.

2009ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಿರಹಟ್ಟಿ, ಮುಳಗುಂದ ಪಟ್ಟಣ ಪಂಚಾಯಿತಿಗಳ ಸಹಯೋಗದಲ್ಲಿ ₹33.50 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿತ್ತು. 2015ರಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನದಿ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ನಿರ್ವಹಣೆ ಉತ್ತಮವಾಗಿ ನಡೆದಿತ್ತು. ನಂತರದ ದಿನಗಳಲ್ಲಿ ಮಾರ್ಗ ಮಧ್ಯೆ ನೀರು ಬಳಸುವ ಸುಗ್ನಳ್ಳಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಹೊಸೂರ, ಛಬ್ಬಿ, ರಣತೂರ ಗ್ರಾಮಗಳು ತಮ್ಮ ಪಾಲಿನ ವೆಚ್ಚ 2016ರ ಮಾರ್ಚ್ 31ರಿಂದ 2020ವರೆಗೆ ಸುಮಾರು ₹1.22 ಕೋಟಿ (₹1,22,93,554) ನೀರಿನ ಕರ ಭರಿಸದೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ನಿರ್ವಹಣೆಗೆ ಹಣವಿಲ್ಲದೆ ನೀರು ಸರಬರಾಜು ಸ್ಥಗಿತಗೊಂಡಿದೆ.

ನದಿ ನೀರು ಸರಬರಾಜು ಆಗುತ್ತಿದ್ದಾಗ ಕೊಳವೆಬಾವಿಯ ಫ್ಲೋರೈಡ್ ನೀರಿನಿಂದ ಮುಕ್ತಿ ಸಿಕ್ಕಿತು ಎಂದು ಪಟ್ಟಣದ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಅದು ಹೆಚ್ಚು ದಿನಗಳು ಇರಲಿಲ್ಲ. ಕಳೆದ 6 ವರ್ಷಗಳಿಂದ ನದಿ ನೀರು ಸರಬರಾಜು ಸ್ಥಗಿತಗೊಂಡಿದೆ. ಈವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸದ ಕಾರಣ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು ಪ್ರಯೋಜನಕ್ಕೆ ಬಾರದಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಿ ನದಿ ನೀರು ಪೂರೈಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈಚೆಗೆ ಪಟ್ಟಣದಲ್ಲಿ ನಡೆದ ಜನತಾ ದರ್ಶನದಲ್ಲಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪೈಪ್ ದುರಸ್ತಿ ಕಾರ್ಯ ಕೈಗೊಳ್ಳುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಕೆಶಿಪ್ ಎಂಜಿನಿಯರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮಹಾಂತೇಶ ಎಚ್.ಕಣವಿ ಹೇಳಿದರು.

ತುಂಗಭದ್ರಾ ನದಿ ನೀರು ಸರಬರಾಜು ಸ್ಥಗಿತಗೊಂಡ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸಿ ಶೀಘ್ರವೇ ನದಿ ನೀರು ಪೂರೈಕೆಗೆ ಕ್ರಮವಹಿಸುವುದಾಗಿ ಸಚಿವ ಎಚ್.ಕೆ.ಪಾಟೀಲ ಹಲವು ಬಾರಿ ಹೇಳಿದ್ದಾರೆ. ಆದರೆ, ಅವರು ಕೊಟ್ಟ ಅವಧಿ ಮುಗಿದಿದೆ; ಕೆಲಸ ಮಾತ್ರ ನಡೆದಿಲ್ಲ. ಸದ್ಯ ಪೂರೈಕೆ ಆಗುತ್ತಿರುವ ಕೊಳವೆಬಾವಿ ನೀರಿನಲ್ಲಿ ಅತ್ಯಧಿಕ ಫ್ಲೋರೈಡ್ ಇದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನದಿ ನೀರು ಪೂರೈಕೆ ಆದರೆ ರೋಗಗಳಿಂದ ಮುಕ್ತಿ ಸಿಗುತ್ತದೆ. ಹಾಗಾಗಿ, ಸ್ಥಳೀಯ ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಳ್ಳಟ್ಟಿ ಗ್ರಾಮದಲ್ಲಿರುವ ಜಲ ಶುದ್ಧೀಕರಣ ಘಟಕ ನದಿ ನೀರು ಸರಬರಾಜು ಸ್ಥಗಿತದಿಂದ ಪಾಳು ಬಿದ್ದಿದೆ
ಕೆಶಿಪ್ ಯೋಜನೆಯಡಿ ಶಿರಹಟ್ಟಿ ಹತ್ತಿರ ರಸ್ತೆ ಅಭಿವೃದ್ಧಿಗಾಗಿ ಮುಳಗುಂದಕ್ಕೆ ನದಿ ನೀರು ಸರಬರಾಜು ಮಾಡುವ ಪೈಪ್‌ಗಳನ್ನು ಕಿತ್ತು ಹಾಕಲಾಗಿದೆ       

ನದಿ ನೀರು ಕುಡಿದಿದ್ದು ಕೆಲವೇ ದಿನ

ತುಂಗಭದ್ರಾ ನದಿ ನೀರು ಪಕ್ಕದ ಹಳ್ಳಿಗಳಿಗೆ ನಿತ್ಯ ಪೂರೈಕೆ ಆಗುತ್ತಿದೆ. ಆದರೆ ಮುಳಗುಂದಕ್ಕೆ ಆ ಭಾಗ್ಯ ಇನ್ನೂ ದೊರಕುತ್ತಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದ ಕಾರಣ, ಜಲ ಶುದ್ಧೀಕರಣಕ್ಕೆ ಹಾಕಿದ್ದ ಹತ್ತಾರು ಕೋಟಿ ರೂಪಾಯಿ ವೆಚ್ಚದ ಯಂತ್ರಗಳು ಮೂಲೆಗುಂಪಾಗಿವೆ. ಹೆಸರಿಗೆ ಮಾತ್ರ ಶಾಶ್ವತ ಕುಡಿಯುವ ನೀರಿನ ಯೋಜನೆ; ಆದರೆ ನದಿನೀರು ಕುಡಿದಿದ್ದು ಮಾತ್ರ ಕೆಲವೇ ದಿನಗಳು.
ರಾಘವೇಂದ್ರ ಕುಂಬಾರಗೇರಿ, ಸ್ಥಳೀಯರು

ಜಿಲ್ಲಾಡಳಿತ ಗಮನ ಹರಿಸಲಿ

ಅಸಮರ್ಪಕ ಕುಡಿಯುವ ನೀರು ಪೂರೈಕೆಯಿಂದ ನೀರಿಗೆ ಬರ ಎದುರಾಗಿದೆ. ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಕೊಳ್ಳುವಂತಾಗಿದೆ. ಇತ್ತ ಕೊಳವೆಬಾವಿ ನೀರು ಇಲ್ಲ; ಅತ್ತ ನದಿ ನೀರು ಇಲ್ಲವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಮನವಿಗಳನ್ನು ನೀಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು.
ದತ್ತಪ್ಪ ಯಳವತ್ತಿ, ರೈತ ಸಂಘದ ಮುಖಂಡ

ಹೋರಾಟ ಅನಿವಾರ್ಯ

ನದಿ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗೆ ಬರ ಆವರಿಸಿದೆ. ನದಿ ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
ಎಂ.ಎಚ್.ಕಣವಿ, ಜೆಡಿಎಸ್ ಸ್ಥಳೀಯ ಘಟಕದ ಅಧ್ಯಕ್ಷ

ಬೇಗ ಕಾಮಗಾರಿ ಪೂರ್ಣಗೊಳಿಸಿ

ನದಿ ನೀರು ಪೂರೈಕೆಗೆ ಈಗ ಯಂತ್ರಗಳ ದುರಸ್ತಿ, ಪೈಪ್ ಜೋಡಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನದಿ ನೀರು ಪೂರೈಸಬೇಕು. ಸ್ಥಳೀಯವಾಗಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಜರುಗಿಸಬೇಕು.
ದ್ಯಾಮಣ್ಣ ನೀಲಗುಂದ, ವಿರೋಧ ಪಕ್ಷದ ನಾಯಕ, ಪಟ್ಟಣ ಪಂಚಾಯಿತಿ ಮುಳಗುಂದ

3 ತಿಂಗಳಲ್ಲಿ ನದಿ ನೀರು ಪೂರೈಕೆ

ಶಿರಹಟ್ಟಿ, ಬೆಳ್ಳಟ್ಟಿ ನಡುವೆ ರಸ್ತೆ ಅಭಿವೃದ್ಧಿಗಾಗಿ ಕಿತ್ತ ಪೈಪ್ ದುರಸ್ತಿ ಕಾರ್ಯ ಮತ್ತು ಯಂತ್ರಗಳ ದುರಸ್ತಿಗೆ ಮನವಿ ಮಾಡಲಾಗಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಈ ಬಗ್ಗೆ ಕ್ರಮ ವಹಿಸಿದ್ದು, ಪೈಪ್ ದುರಸ್ತಿ ಕಾರ್ಯ ನಡೆದಿದೆ. ಅಮೃತ 2.0 ಯೋಜನೆ ಅಡಿ ಯಂತ್ರಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಪಟ್ಟಣಕ್ಕೆ ಇನ್ನು 3 ತಿಂಗಳಲ್ಲಿ ನದಿ ನೀರು ಪೂರೈಕೆ ಆಗಲಿದೆ.
ಮಂಜುನಾಥ ಗುಳೇದ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮುಳಗುಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.