ಲಕ್ಷ್ಮೇಶ್ವರ: ತುಂಗಭದ್ರಾ ನದಿ ನೀರಿನಿಂದ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕಿನ ಕೆರೆ ಮತ್ತು ಚೆಕ್ ಡ್ಯಾಂಗಳನ್ನು ತುಂಬಿಸುವ ಯೋಜನೆಗೆ 2018ರಲ್ಲಿಯೇ ಚಾಲನೆ ನೀಡಲಾಗಿತ್ತು. 2020ರಲ್ಲಿ ಮುಗಿಯಬೇಕಿದ್ದ ಈ ಯೋಜನೆ ಹಲವಾರು ಕಾರಣಗಳಿಂದ ಈವರೆಗೂ ಪೂರ್ಣಗೊಂಡಿಲ್ಲ.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಬಜೆಟ್‍ನಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿತ್ತು. ಆಗಿನ ಶಾಸಕ ರಾಮಕೃಷ್ಣ ದೊಡ್ಡಮನಿಯವರು ಯೋಜನೆ ಅನುಷ್ಠಾನಕ್ಕೆ ₹147 ಕೋಟಿ ಬಿಡುಗಡೆ ಮಾಡಿಸಿದ್ದರು. ಮಂಗಳೂರು ಮೂಲದ ಓಯಾಸಿಸ್ ಕನ್‍ಸ್ಟ್ರಕ್ಷನ್ ಕಂಪನಿ ₹137 ಕೋಟಿಗೆ ಕಾಮಗಾರಿ ಗುತ್ತಿಗೆ ಪಡೆದಿತ್ತು. ಕಾಮಗಾರಿ ಜವಾಬ್ದಾರಿಯನ್ನು ಭಾರೀ ನೀರಾವರಿ ಇಲಾಖೆಗೆ ವಹಿಸಲಾಗಿತ್ತು.
ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮದ ಹತ್ತಿರ ಹರಿದಿರುವ ತುಂಗಭದ್ರಾ ನದಿ ದಂಡೆಯ ಮೇಲೆ ಜಾಕ್‍ವೆಲ್ ನಿರ್ಮಿಸಿ ಅಲ್ಲಿಂದ ಪೈಪ್‍ಲೈನ್ ಅಳವಡಿಸಿ ಶಿರಹಟ್ಟಿ ತಾಲ್ಲೂಕಿನ ತಂಗೋಡ, ಬೆಳ್ಳಟ್ಟಿ, ಮಾಚೇನಹಳ್ಳಿ, ಮಜ್ಜೂರು, ಛಬ್ಬಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ಮಂಜಲಾಪುರ, ಇಟ್ಟಿಗೇರಿ ಕೆರೆ, ದುಂಡಿಬಸವಣ್ಣನ ಕೆರೆ ಸೇರಿದಂತೆ ಒಟ್ಟು 18 ಕೆರೆಗಳು ಮತ್ತು 36 ಚೆಕ್‍ಡ್ಯಾಂಗಳನ್ನು ಯೋಜನೆಯಡಿ ತುಂಬಿಸಬೇಕಾಗಿತ್ತು. ಯೋಜನೆಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಪರಿಹರಿಸಿ 2024ರ ಫೆಬ್ರುವರಿ 14ಕ್ಕೆ ಪೈಪ್‍ಲೈನ್ ಅಳವಡಿಕೆ ಕೆಲಸ ಮುಗಿಯಬೇಕಿತ್ತು ಕಾಮಗಾರಿ ಮುಗಿಯದ ಕಾರಣ ಸಧ್ಯ ನದಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆದರೆ ಕೆರೆಗಳು ಮಾತ್ರ ತುಂಬುತ್ತಿಲ್ಲ.
‘ಯೋಜನೆಯಡಿ 34.94 ಕಿ.ಮೀ ಎಚ್‌ಪಿಡಿಇ ಪೈಪ್‌ಲೈನ್ ಪೈಕಿ 33.16 ಕಿ.ಮೀ ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇನ್ನು 23.12 ಕಿಮೀ ಬಿಡಬ್ಲ್ಯೂಸಿ ಪೈಪ್‍ಗಳ ಪೈಕಿ 21.10 ಪೂರ್ಣವಾಗಿದೆ. ಮೂರು ಡೆಲವರಿ ಚೆಂಬರ್‌ಗಳ ಪೈಕಿ ಎರಡು ನಿರ್ಮಾವಾಗಿದ್ದು, ಇನ್ನೊಂದು ಶಿರಹಟ್ಟಿ ತಾಲ್ಲೂಕಿನ ಶ್ರೀಮಂತಗಡದಲ್ಲಿ ನಿರ್ಮಾಣವಾಗುವುದು ಬಾಕಿ ಉಳಿದಿದೆ. ಅದರಂತೆ ಲಕ್ಷ್ಮೇಶ್ವರ-ಕುಂದ್ರಳ್ಳಿ ಮಧ್ಯದಲ್ಲಿ ಪೈಪ್‍ಲೈನ್ ಅಳವಡಿಸಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಪೈಪ್‍ಲೈನ್ ಬರುವುದರಿಂದ ಇಲಾಖೆಯ ಪರವಾನಿಗೆ ಬೇಕಾಗಿದೆ. ಅದರೊಂದಿಗೆ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯವೂ ಇದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಭಾರೀ ನೀರಾವರಿ ಇಲಾಖೆ ಇಇ ಐ.ಪ್ರಕಾಶ ತಿಳಿಸಿದರು.
ಗುತ್ತಿಗೆದಾರರ ಆಮೆ ವೇಗದ ಕಾಮಗಾರಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹತ್ವದ ಯೋಜನೆ ಕುಂಟುತ್ತ ಸಾಗಿದೆ. ಸಮಸ್ಯೆಗಳನ್ನು ಬಗೆ ಹರಿಸಿ ಶೀಘ್ರ ಯೋಜನೆ ಪೂರ್ಣಗೊಳಿಸಿ ಕೆರೆಗಳನ್ನು ತುಂಬಿಸಬೇಕುರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.