ನರಗುಂದ: ಒಂದು ವಾರದಿಂದ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದ ರೈತರು ಪಟ್ಟಣದ ಶಿವಾಜಿ ವೃತ್ತದಲ್ಲಿ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಅರ್ಧಗಂಟೆಗೂ ಹೆಚ್ಚು ಹೆದ್ದಾರಿ ತಡೆದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದ್ದು ಕಂಡುಬಂತು. ಪೊಲೀಸರು ಸಮಾಧಾನಗೊಳಿಸಿದರೂ ಕೃಷಿ ಅಧಿಕಾರಿಗಳು, ತಹಶೀಲ್ದಾರ್ ಬಂದು ಗೊಬ್ಬರ ಪೂರೈಕೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟುಹಿಡಿದರು.
‘ಹಗ್ಗಾ ಕೊಡಿ, ಇಲ್ಲಾ ಗೊಬ್ಬರ ಕೊಡಿ... ಇಲ್ಲಿಯೇ ಆತ್ಮಹತ್ಯೆಗೆ ಶರಣಾಗುತ್ತೇವೆ’ ಎಂದು ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ದತ್ತು ಜೋಗಣ್ಣವರ ಮಾತನಾಡಿ, ‘ಸಕಾಲಕ್ಕೆ ಬೆಳೆಗಳಿಗೆ ಗೊಬ್ಬರ ಪೂರೈಸದ ಪರಿಣಾಮ ಬೆಳೆ ಬೆಳೆದರೂ ಹಾನಿಯಾಗುವಂತಾಗಿವೆ. ಗೋವಿನಜೋಳಕ್ಕೆ ಯೂರಿಯಾ ಅಗತ್ಯವಿದೆ. ನಿತ್ಯ ತಾಲ್ಲೂಕಿನ ರೈತರು ಅಗ್ರೋ ಸೆಂಟರ್‌ಗಳಿಗೆ, ಸೊಸೈಟಿಗಳಿಗೆ ಅಲೆದಾಡಿದರೂ ಗೊಬ್ಬರ ದೊರೆಯುತ್ತಿಲ್ಲ. ಸಣ್ಣ ಹಿಡುವಳಿದಾರರ ಕಷ್ಟವಂತೂ ಹೇಳತೀರದಾಗಿದೆ. ಬೆಳಿಗ್ಗೆಯಿಂದ ಸರತಿ ಹಚ್ಚಿದರೂ ಗೊಬ್ಬರ ದೊರೆಯುತ್ತಿಲ್ಲ’ ಎಂದರು.
ತಹಶೀಲ್ದಾರ್ ಶ್ರೀಶೈಲ ತಳವಾರ ಹಾಗೂ ಕೃಷಿ ಅಧಿಕಾರಿಗಳು ಭೇಟಿನೀಡಿ ಪ್ರತಿಭಟನೆ ಹಿಂಪಡೆಯಲು ತಿಳಿಸಿದರು. ಆದರೆ, ಗೊಬ್ಬರ ಸಿಗುವ ಕುರಿತು ಸ್ಪಷ್ಟತೆ ನೀಡಬೇಕು ಪ್ರತಿಭಟನಕಾರರು ಪಟ್ಟು ಹಿಡಿದರು. ಭಾನುವಾರ ಗೊಬ್ಬರ ಪೂರೈಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಇಸ್ಮಾಯಿಲ್ ಜಮಾದಾರ್, ನವೀನ್ ಜೋಗನ್ನವರ, ಗುರುನಾಥ ಹಾಗೂ ಭೈರನಹಟ್ಟಿ, ಸುರಕೋಡ, ಕಣಕಿಕೊಪ್ಪ, ಗುರ್ಲಕಟ್ಟಿ, ಹಿರೇಕೊಪ್ಪ, ಚಿಕೊಪ್ಪ ಗ್ರಾಮದ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.