ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದ ಕಪ್ಪತ್ತಗುಡ್ಡದ ಮಧ್ಯವಿರುವ ಚಿಕ್ಕ ಗ್ರಾಮ ವರವಿ. ಬಯಲುರಂಗದಲ್ಲಿನ ಸ್ವಚ್ಛಂದ ಪರಿಸರದಲ್ಲಿ ಹಾಸುಹೊಕ್ಕಾಗಿರುವ ಗ್ರಾಮದಲ್ಲಿ ಸರ್ವಧರ್ಮಿಯರ ಗುರುವಾಗಿ ನೆಲೆಸಿರುವ ಮೌನೇಶ್ವರರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು ಎಂದು ನಿತ್ಯ ಆರಾಧಿಸಲಾಗುತ್ತಿದೆ. ಶ್ರಾವಣ ಮಾಸದ ಕೊನೆಯ ಸೋಮವಾರದಂದು ಮೌನೇಶ್ವರರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಲಿದೆ.
ಮೌನೇಶ್ವರರು ಕಲಬುರಗಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರ ಗೋನಾಳದವರು. ವಿಶ್ವಕರ್ಮ ವಂಶಜರಾದ ಶೇಕಪ್ಪ ಮತ್ತು ಶೇಷಮ್ಮನವರ ಮಗನಾಗಿ ಅವತರಿಸಿ ಹಲವಾರು ಸ್ಥಳಗಳಲ್ಲಿ ಸಂಚರಿಸಿ ಪವಾಡಗಳನ್ನು ಮಾಡಿದ ಕುರುಹುಗಳಿವೆ. ಮೌನೇಶ್ವರ ದೇವಾಲಯವು ಯಾವುದೇ ಕುಸುರಿಯಿಂದ ಅಳವಡಿಸಲ್ಪಟ್ಟಿಲ್ಲ. ಈ ದೇವಾಲಯವು ವಿಜಾಪುರದ ಆದಿಲ್‌ಶಾಹಿ ಕಾಲದಲ್ಲಿ ಕಟ್ಟಿಸಲಾಗಿದೆ ಎಂಬುದು ಇತಿಹಾಸ
ಉದ್ಭವ ಶಿವಲಿಂಗ: ಮೌನೇಶ್ವರ ಸ್ವಾಮಿ ಒಂದು ದಿನ ಆ ಹಳ್ಳಿಯ ಹೊರವಲಯದಲ್ಲಿದ್ದ ಒಂದು ಕಲ್ಲಿಗೆ ಬಲಗಾಲು ತಾಕಿ ಅಲ್ಲಿಯೇ ಸ್ವಲ್ಪ ವಿಶ್ರಮಿಸಿದರು. ಸರ್ವಾಂತರ್ಯಾಮಿಯಾದ ನೀನೆ ಹೀಗೆ ಕಲ್ಲೆಡವಬೇಕೆ? ಎಂದು ಶಿಷ್ಯರು ಪ್ರಶ್ನಿಸಿದಾಗ, ಮುಂದೊಂದು ದಿನ ಈ ಗ್ರಾಮವು ಸರ್ವಶ್ರೇಷ್ಠ ಕ್ಷೇತ್ರವೆಂಬ ಕೀರ್ತಿ ಪಡೆಯುತ್ತದೆ. ನಾನೀಗ ಎಡವಿದ ಕಲ್ಲು ಸ್ವಯಂ ಉದ್ಭವ ಶಿವಲಿಂಗ. ನನ್ನ ಸರ್ವಶಕ್ತಿಯನ್ನೆಲ್ಲ ಈ ಶಿವಲಿಂಗದಲ್ಲಿ ಸಂಚಯಗೊಳಿಸಿದ್ದೇನೆ ಎಂದು ಹೇಳುತ್ತಾರೆ.
ಆಗ ಗ್ರಾಮದ ಭಕ್ತರು ಶಿವಲಿಂಗವನ್ನು ಕಟ್ಟಡವಿಲ್ಲದೇ ಬರಿ ಬಯಲಲ್ಲೇ ಪೂಜಿಸಲಾರಂಭಿಸಿದರು. ಮಂದಿರ ಕಟ್ಟಿಸಬೇಕೆಂದು ಮನದಲ್ಲಿ ಯೋಚಿಸಿ ವಿಜಯಪುರದ ಬಾದ್‌ಶಾಹನ ದೂತರು ಮಂದಿರ ನಿರ್ಮಿಸುತ್ತಾರೆ. ಅದೇ ಮೌನೇಶ್ವರ ಮಠ ಎಂದು ಪ್ರಸಿದ್ಧವಾಯಿತು.
ಅಂಬಲಿ ತೀರ್ಥ: ಮೌನೇಶ್ವರರು ವರವಿಯ ಸುತ್ತಮುತ್ತಲೂ ಅನೇಕ ಪವಾಡಗಳನ್ನು ಮಾಡುತ್ತಾ ಸಂಚರಿಸುತ್ತಿದ್ದಾಗ, ಆ ಗ್ರಾಮದ ಕ್ಯಾಸಕ್ಕಿ ಮನೆತನದ ಸೊಸೆ ಜಕ್ಕವ್ವಳು ನೀರಿಗಾಗಿ ಕೊಡ ತೆಗೆದುಕೊಂಡು ಹೊರ ವಲಯದಲ್ಲಿರುವ ಹಳ್ಳಕ್ಕೆ ಹೊರಟಿದ್ದಳು. ಮೌನೇಶ್ವರರು ಚಿಲುಮೆಯನ್ನು ಸೇದಬೇಕೆಂಬ ಹಂಬಲದಿಂದ ಚಿಲುಮೆ ಹಾಕಿದರು. ಬೆಂಕಿ ಇಲ್ಲದ ಕಾರಣ ದಾರಿಯಲ್ಲಿ ಬರುತ್ತಿರುವ ಹೆಣ್ಣು ಮಗಳಿಗೆ ಬೆಂಕಿ ತರಲು ಹೇಳುತ್ತಾರೆ. ಬೆಂಕಿಯನ್ನು ತಂದ ಮೇಲೆ ಅಲ್ಲಿಯೇ ತಮ್ಮ ಕೈಯಲ್ಲಿರುವ ವಸ್ತುವೊಂದರಿಂದ ನೆಲವನ್ನು ಒತ್ತಲು ಅಲ್ಲಿ ನೀರು ಹರಿಯಲು ಪ್ರಾರಂಭಿಸಿತು. ಬೆಂಕಿಯನ್ನು ತಂದ ಜಕ್ಕವ್ವಳಿಗೆ ಆ ವರ್ತಿಯಲ್ಲಿನ ನೀರು ತೆಗೆದುಕೊಂಡು ಹೋಗಿ ಅಂಬಲಿ ಹಾಕದೆ ಅಡುಗೆ ಮಾಡಿದಳು. ಅಂದಿನಿಂದ ಅದಕ್ಕೆ ಅಂಬಲಿ ತೀರ್ಥ ಎಂದು ಹೆಸರಿಟ್ಟರು. ಈ ತೀರ್ಥದಲ್ಲಿ ಸರ್ವ ರೋಗವನ್ನು ನಿವಾರಿಸುವ ಶಕ್ತಿ ಇದೆ. ಅಲ್ಲದೇ ಇಂದಿಗೂ ವರವಿ ಸುತ್ತಮುತ್ತಲಿನ ಗ್ರಾಮದ ಜನರು ಬೆಳೆಗಳಿಗೆ ಯಾವುದೇ ರೋಗ ಬಂದರೂ ಈ ನೀರನ್ನೇ ಸಿಂಪಡಿಸುತ್ತಾರೆ.
ಸರ್ವಧರ್ಮಿಯರ ಗುರು: ವಿಜಯಪುರದಲ್ಲಿ ಆಳ್ವಿಕೆ ಮಾಡುತ್ತಿದ್ದ ಆದಿಲ್‌ಶಾಹಿ ಆಸ್ಥಾನಕ್ಕೆ ಮೌನೇಶ್ವರರು ಬಂದು ಪವಾಡ ಮೆರೆಯುವ ಮೂಲಕ ಫಕೀರನಾಗಿ ಪೂಜೆಗೂಳ್ಳುತ್ತಾರೆ. ಇಂದಿಗೂ ಅವರು ಉಭಯ ಜನಾಂಗಕ್ಕೂ ಫಕೀರ ಮತ್ತು ಪರಮಾತ್ಮನಾಗಿ ಪೂಜೆಗೂಳ್ಳುತ್ತಿದ್ದಾರೆ. ಸುರಪುರದ ನಾಯಕರು ಮೌನೇಶ್ವರರ ಆಶೀರ್ವಾದದಿಂದ ದೊರೆಗಳಾದರೆಂದು ಪ್ರತೀತಿ ಇದೆ. ವರವಿಯಲ್ಲಿ ಶಿವಲಿಂಗ ಪೂಜೆಗೊಳ್ಳುತ್ತಿದ್ದು, ಮೋಹರಂ ಹಬ್ಬದಲ್ಲಿ ದೇವಾಲಯದಲ್ಲಿ ಪಾಂಜಾಗಳನ್ನು ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡಲಾಗುತ್ತಿದೆ.
ಜಾತ್ರಾ ವಿಶೇಷ:
ಸರ್ವಧರ್ಮಿಯರ ಗುರುವಾದ ವರವಿ ಮೌನೇಶ್ವರರ ಜಾತ್ರಾ ಮಹೋತ್ಸವವು ಬ್ರಾಹ್ಮೀ ಮಹೂರ್ತದಲ್ಲಿ ಪ್ರಾರಂಭವಾಗಿ ಇಂದಿನಿಂದ ಐದು ದಿನಗಳವರೆಗೆ ಅದ್ಧೂರಿಯಾಗಿ ನಡೆಯಲಿದೆ. ಸೋಮವಾರ ಬೆಳಿಗ್ಗೆ ಮೌನೇಶ್ವರರಿಗೆ ಬಂಗಾರದ ಮುಖವಾಡ ತೋಡಿಸಲಾಗುತ್ತಿದ್ದು ಈ ವೇಳೆ ಭಕ್ತರು ಹೊತ್ತ ಹರಕೆ ಶೀಘ್ರವಾಗಿ ಈಡೇರುವ ಸಂಪ್ರದಾಯವಿದೆ. ಸಂಜೆ 5ಕ್ಕೆ ಸಾಂಪ್ರಾದಾಯಿಕ ರಥೋತ್ಸವ ನಡೆಯಲಿದೆ. ಆ.19ರಂದು ಕಡುಬಿನ ಕಾಳಗ ಉತ್ಸವ ಆ.20ರಂದು ಪಲ್ಲಕ್ಕಿ ಛಬ್ಬಿಗೆ ಹೋಗುವುದು. ಆ.21ರಂದು ಮೌನೇಶ್ವರರು ಅಲಾವಿಗುಡ್ಡಕ್ಕೆ ಹೋಗುವುದು ಹಾಗೂ ಪುರವಂತರ ಸೇವೆ ಆ.22ರಂದು ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಸ್ತುತ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳು ಹಾಗೂ ಅಕ್ಕಪಕ್ಕದ ರಾಜ್ಯಗಳಿಂದ ಭಕ್ತರು ಬರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.