ADVERTISEMENT

ವಿಬಿ ಜಿ ರಾಮ್‌ ಜಿ ಯೋಜನೆ: ಎಚ್‌.ಕೆ.ಪಾಟೀಲ– ಸಂಕನೂರ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 22:43 IST
Last Updated 26 ಜನವರಿ 2026, 22:43 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ವಿಷಯವು ಸೋಮವಾರ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಎಸ್‌.ವಿ. ಸಂಕನೂರ ಮತ್ತು ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ, ‘ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಯೋಜನೆ ಮೂಲಕ ಬಡ ಕೂಲಿಕಾರರ ಉದ್ಯೋಗ ಮತ್ತು ನಿರುದ್ಯೋಗ ಭತ್ಯೆಯ ಯೋಜನೆ ಕಸಿದುಕೊಂಡಿದೆ’ ಎಂದರು.

ವೇದಿಕೆಯಲ್ಲಿದ್ದ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಖಂಡಿಸಿದರು. ಬಳಿಕ ಸಿಟ್ಟಿನಿಂದಲೇ ವೇದಿಕೆಯಿಂದ ಇಳಿದು ಹೊರನಡೆದರು. ಆಗ ಎಚ್‌.ಕೆ.ಪಾಟೀಲ ಮೂರು–ನಾಲ್ಕು ಮಾತುಗಳನ್ನು ಆಡಿದ್ದು ಬಿಟ್ಟರೆ, ಬೇರೆನೂ ಪ್ರತಿಕ್ರಿಯಿಸಲಿಲ್ಲ. ಭಾಷಣ ಮುಂದುವರೆಸಿದರು.

ADVERTISEMENT

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಸ್‌.ವಿ.ಸಂಕನೂರ, ‘ಗಣರಾಜ್ಯೋತ್ಸವ ಸಂದೇಶ ಓದುವ ವೇಳೆ ಸಚಿವ ಎಚ್‌.ಕೆ.ಪಾಟೀಲ ಕೇಂದ್ರದ ವಿರುದ್ಧ ಸಾಕಷ್ಟು ಟೀಕೆ ಮಾಡಿದ್ದಾರೆ. ವಿಬಿ ಜಿ ರಾಮ್‌ ಜಿ ಯೋಜನೆ ಕುರಿತು ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ. ಬಡವರ ಉದ್ಯೋಗ ಹಕ್ಕು ಕಸಿದುಕೊಂಡಿದ್ದಾರೆ ಎಂಬ ಆರೋಪ ಕೇಳಲಿಕ್ಕೆ ಸಾಧ್ಯವಿಲ್ಲ. ಇದನ್ನು ಪ್ರತಿಭಟಿಸಿ, ಹೊರನಡೆದು ಬಂದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.