ADVERTISEMENT

ನಾಲ್ಕನೇ ಘಟಿಕೋತ್ಸವಕ್ಕೆ ಗ್ರಾಮೀಣಾಭಿವೃದ್ಧಿ ವಿವಿ ಸಜ್ಜು

ಸಬರಮತಿ ಆಶ್ರಮದಿಂದ ಚಾಲನೆ: ಎಲ್ಲರೂ ಖಾದಿ ದಿರಿಸು ಧರಿಸುವುದು ವಿಶೇಷ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:57 IST
Last Updated 27 ಫೆಬ್ರುವರಿ 2024, 4:57 IST
ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ
ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ   

ಗದಗ: ‘ಗ್ರಾಮೀಣಾಭಿವೃದ್ಧಿಯ ಸಂಕಲ್ಪದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯವು ಮಾರ್ಚ್ 6ರಂದು ನಾಲ್ಕನೇ ಘಟಿಕೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಜತೆಗೆ, ಅವರನ್ನು ಗ್ರಾಮೀಣಾಭಿವೃದ್ಧಿಯ ವಿವಿಧ ಆಯಾಮಗಳಿಗೆ ಕೊಡುಗೆ ನೀಡುವಂತೆ ಸನ್ನದ್ಧಗೊಳಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದ್ದು, ಗ್ರಾಮೀಣಾಭಿವೃದ್ಧಿಗೆ ಪೂರಕವಾದ ವಿವಿಧ ವಿಷಯಗಳಲ್ಲಿ ಬೋಧನೆ, ಸಂಶೋಧನೆ, ವಿಸ್ತೀರ್ಣ ಚಟುವಟಿಕೆಗಳನ್ನು ನಡೆಸುತ್ತಾ, ಪದವಿಗಳನ್ನು ನೀಡುತ್ತಾ ಬಂದಿದೆ. ಆರು ಶೈಕ್ಷಣಿಕ ವರ್ಷಗಳಲ್ಲಿ ಮೂರು ಅರ್ಥಪೂರ್ಣ ಘಟಿಕೋತ್ಸವಗಳನ್ನು ಆಚರಿಸಿದೆ’ ಎಂದು ತಿಳಿಸಿದ್ದಾರೆ. 

ವಿಶ್ವವಿದ್ಯಾಲಯದ ಪ್ರತಿ ಘಟಿಕೋತ್ಸವಕ್ಕೆ ಸಬರಮತಿ ಆಶ್ರಮದಿಂದ ಚಾಲನೆ ನೀಡಲಾಗುತ್ತದೆ. ಸಮಾರಂಭದಲ್ಲಿ ಭಾಗಿಯಾದ ಗಣ್ಯರೆಲ್ಲರೂ ಆಶ್ರಮದ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಖಾದಿ ಪೋಷಾಕಿನೊಂದಿಗೆ ಘಟಿಕೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಬ್ದಗಳ ಸ್ವರಮೇಳ, ಗಣ್ಯರ, ಅಧ್ಯಾಪಕರ, ಪದವಿ ಪಡೆದ ವಿದ್ಯಾರ್ಥಿಗಳಿಂದ ಕೂಡಿದ ಭವ್ಯ ಮೆರವಣಿಗೆ, ಪದವೀಧರರನ್ನು ಪ್ರೇರೇಪಿಸುವ ಅತಿಥಿಗಳ ಸ್ಪೂರ್ತಿದಾಯಕ ಭಾಷಣ, ವಿದ್ಯಾರ್ಥಿಗಳು ವೇದಿಕೆ ಉದ್ದಕ್ಕೂ ನಡೆದು ಬಂದು ಪದವಿ ಪ್ರಮಾಣಪತ್ರ ಸ್ವೀಕರಿಸುವ ದೃಶ್ಯಗಳು, ಇದನ್ನು ಹುರಿದುಂಬಿಸುವ ಸ್ನೇಹಿತರು ಮತ್ತು ಕುಟುಂಬದವರು ಸಮಾರಂಭದ ಇಂತಹ ಪ್ರತಿಯೊಂದು ಸನ್ನಿವೇಶಗಳು ಮರೆಯಲಾರದ ಅನುಭವ ಕಟ್ಟಿಕೊಡುತ್ತವೆ ಎಂದು ತಿಳಿಸಿದ್ದಾರೆ.

ADVERTISEMENT

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಭಾಗಿಯಾಗಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್‍ ಪ್ರದಾನ ಮಾಡುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರಿಯಾಂಕ್ ಖರ್ಗೆ ಘನ ಉಪಸ್ಥಿತಿ ವಹಿಸುವರು ಎಂದರು.

ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಡಾ. ಟಿ.ಆರ್.ರಘನಂದನ್ ಅವರು ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಘಟಿಕೋತ್ಸವ ವೇದಿಕೆಯಲ್ಲಿ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕುಲಸಚಿವ ಪ್ರೊ. ಸುರೇಶ ವಿ. ನಾಡಗೌಡರ, ವಿವಿಧ ನಿಕಾಯಗಳ ಮುಖ್ಯಸ್ಥರು ಮತ್ತು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ ಸದಸ್ಯರು, ಶೈಕ್ಷಣಿಕ ಪರಿಷತ್‌ನ ಸದಸ್ಯರು ಹಾಜರಿರುವರು ಎಂದು ತಿಳಿಸಿದ್ದಾರೆ.

ಗ್ರಾಮೀಣ ಪರಂಪರೆಯ ಪ್ರತೀಕ ಗ್ರಾಮೀಣಾಭಿವೃದ್ಧಿ

ವಿಶ್ವವಿದ್ಯಾಲಯ ಆಯೋಜಿಸುವ ಘಟಿಕೋತ್ಸವ ಸಮಾರಂಭವು ಸಂಪೂರ್ಣವಾಗಿ ಗ್ರಾಮೀಣ ಸೊಗಡಿನೊಂದಿಗೆ ಹಾಗೂ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳೊಂದಿಗೆ ರೂಪುಗೊಳ್ಳುತ್ತದೆ ಎಂದು ಆರ್‌ಡಿಪಿಆರ್ ವಿಭಾಗದ ಅಧ್ಯಾಪಕ ಪ್ರಕಾಶ ಎಸ್. ಮಾಚೇನಹಳ್ಳಿ ತಿಳಿಸಿದ್ದಾರೆ. ಗ್ರಾಮೀಣ ಪರಂಪರೆಯನ್ನು ಪ್ರತಿನಿಧಿಸುವುದು ವಿದ್ಯಾರ್ಥಿಗಳನ್ನು ಗ್ರಾಮೀಣಾಭಿವೃದ್ಧಿಗೆ ಅಣಿಗೊಳಿಸುವುದು ಘಟಿಕೋತ್ಸವದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಗ್ರಾಮೀಣಾಭಿವೃದ್ಧಿ ಗ್ರಾಮೀಣ ನಿರ್ವಹಣೆ ಸಮಾಜಕಾರ್ಯ ವಾಣಿಜ್ಯ ಆಹಾರ ತಂತ್ರಜ್ಞಾನ ಭೂ-ಮಾಹಿತಿ ತಂತ್ರಜ್ಞಾನ ಆಡಳಿತ ಹಾಗೂ ಅರ್ಥಶಾಸ್ತ್ರ ಸೇರಿದಂತೆ ಮೊದಲಾದ ವಿಷಯಗಳಲ್ಲಿ ಉತ್ತೀರ್ಣರಾದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಈ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಿದೆ. 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ 20 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ಪ್ರಮಾಣಪತ್ರ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.