
ಗದಗ: ‘ಸಾಮಾಜಿಕ ಸೇವೆಯೇ ದೇವರ ಸೇವೆ ಎಂಬ ಸಂದೇಶ ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದ ಅವರು ಜಾಗತಿಕ ಐಕ್ಯತೆ, ಮಾನವೀಯ ಮೌಲ್ಯ, ಸೇವಾಭಾವನೆಯ ಮೂಲಕ ವಿಶ್ವದ ಗಮನ ಸೆಳೆದಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸ್ವಾಮಿ ವಿವೇಕಾನಂದ ಅವರು ಅಲ್ಪಾಯುಷ್ಯದಲ್ಲೇ ಅಪಾರ ಸಾಧನೆ ಮಾಡಿದ ಮಹಾನ್ ಚಿಂತಕ. ಸದೃಢ ಯುವಕರ ರೂಪಿಸುವಲ್ಲಿ ಸ್ವಾಮಿ ವಿವೇಕಾನಂದ ಅವರ ಪಾತ್ರ ಪ್ರಭಾವಶಾಲಿ’ ಎಂದು ಹೇಳಿದರು.
ಗದಗ-ಹುಲಕೋಟಿ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶಿವಪ್ರಿಯಾನಂದ ಮಹಾರಾಜ ಮಾತನಾಡಿ, ‘ಸ್ವಾಮಿ ವಿವೇಕಾನಂದ ಅವರು ಶಕ್ತಿಯ ಸಂಕೇತ. ಅವರ ಸಂದೇಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ‘ಸ್ವಾಮಿ ವಿವೇಕಾನಂದ ಅವರು ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ವ್ಯಕ್ತಿ. ಪ್ರತಿಯೊಬ್ಬರ ಚಿಂತನೆ, ನಡೆನುಡಿಗಳು ಸುಧಾರಣೆಯಾದಾಗ ಮಾತ್ರ ದೇಶ ಸುಧಾರಣೆ ಸಾಧ್ಯ’ ಎಂದರು.
ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸುಮೇದಾನಂದಜಿ ಮಹಾರಾಜರು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಎಸ್. ಬುರುಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಬಾಹುಬಲಿ ಜೈನರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.