ADVERTISEMENT

ಮುಂಡರಗಿ: ಸಮಸ್ಯೆಗಳ ಸುಳಿಯಲ್ಲಿ 10ನೇ ವಾರ್ಡ್‌

ತಿಂಗಳಿಗೊಮ್ಮೆ ಚರಂಡಿ ಸ್ವಚ್ಛತೆ, ಶೌಚಕ್ಕೆ ಬೇರೆ ವಾರ್ಡ್‌ಗೆ ಹೋಗುವ ಸಂಕಷ್ಟ

ಕಾಶಿನಾಥ ಬಿಳಿಮಗ್ಗದ
Published 7 ಏಪ್ರಿಲ್ 2021, 1:35 IST
Last Updated 7 ಏಪ್ರಿಲ್ 2021, 1:35 IST
ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವ ಕಿರಿದಾದ ಮತ್ತು ಇಕ್ಕಟ್ಟಾಗಿರುವ ಮುಂಡರಗಿ ಪಟ್ಟಣದ 10ನೇ ವಾರ್ಡ್‌ನ ರಸ್ತೆ
ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವ ಕಿರಿದಾದ ಮತ್ತು ಇಕ್ಕಟ್ಟಾಗಿರುವ ಮುಂಡರಗಿ ಪಟ್ಟಣದ 10ನೇ ವಾರ್ಡ್‌ನ ರಸ್ತೆ   

ಮುಂಡರಗಿ: ಪಟ್ಟಣದ 10ನೇ ವಾರ್ಡ್‌ನ (ಗೊಂದಳಿ ಹಾಗೂ ಭಜಂತ್ರಿ ಓಣಿ) ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವರಲ್ಲಿ ಅನೇಕರು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಯನ್ನು ನಿತ್ಯ ದೂಷಿಸುತ್ತಿದ್ದಾರೆ.

ವಾರ್ಡ್‌ನಲ್ಲಿ ತುಂಬ ಕಿರಿದಾದ ರಸ್ತೆಗಳಿವೆ. ಇಕ್ಕಟ್ಟಾಗಿರುವ ರಸ್ತೆ ಹಾಗೂ ಚರಂಡಿಗಳನ್ನು ನಿಯಮಿತವಾಗಿ ಸ್ಚಚ್ಛಗೊಳಿಸದೇ ಇರುವುದರಿಂದ ಚರಂಡಿಯ ಗಲೀಜು ನೀರು ಮನೆಗಳ ಅಕ್ಕಪಕ್ಕದಲ್ಲಿ ಹಾಗೂ ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ. ಪುರಸಭೆಯ ಕಸ ವಿಲೇವಾರಿ ವಾಹನಗಳು ಇಲ್ಲಿಗೆ ಬಾರದಂತಾಗಿದೆ. ತಿಂಗಳಿಗೊಮ್ಮೆ ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿ ನಂತರ ಇತ್ತ ಸುಳಿಯುವುದಿಲ್ಲ ಎಂದು ವಾರ್ಡಿನ ಜನರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ವಾರ್ಡ್‌ನ ಜನರು ಹಗಲಿರುಳು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

ವಾರ್ಡ್‌ ಬಳಿ ಮಾಂಸದ ಅಂಗಡಿಗಳಿದ್ದು, ಬೀದಿನಾಯಿಗಳ ಹಾವಳಿಯೂ ವಿಪರೀತವಾಗಿದೆ. ಹಲವಾರು ಬಾರಿ ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದಾರೆ. ಚರಂಡಿ ಹಾಗೂ ರಸ್ತೆಗಳು ಗಲೀಜಾಗಿರುವುದರಿಂದ ಹಂದಿಗಳ ಕಾಟವೂ ವಿಪರೀತವಾಗಿದೆ. ಮನೆಯ ಹೊರ ಭಾಗದಲ್ಲಿ ಏನನ್ನೂ ಇಡಲಾರದಂತಹ ಪರಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲವಾದ್ದರಿಂದ ವಾರ್ಡ್‌ನ ಎಲ್ಲ ಮಹಿಳೆಯರು ದೂರದಲ್ಲಿರುವ ಬೇರೊಂದು ವಾರ್ಡ್‌ನ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಸರದಿಯಲ್ಲಿ ನಿಂತು ಶೌಚ ಕರ್ಮಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಭಜಂತ್ರಿ ಓಣಿಯ ಮುಂಭಾಗದ ಬಯಲು ಜಾಗ ಹಾಗೂ ಖಾಲಿ ನಿವೇಶನಗಳು ಕಸಕಡ್ಡಿಗಳಿಂದ ಆವೃತ್ತವಾಗಿವೆ. ರಸ್ತೆಯ ಮೇಲೆ ಜನರು ಸಾಮಗ್ರಿ ಸಲಕರಣೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ನಾಲ್ಕು ಚಕ್ರಗಳ ವಾಹನಗಳು ಸಂಚರಿಸದಂತಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಾಗಿದೆ.

‘ವಾರ್ಡ್‌ ಸದಸ್ಯೆ ರುಕ್ಮಿಣಿ ಸುಣಗಾರ ಮತಹಾಕದವರ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳುತ್ತಾರೆ. ವಾರ್ಡ್‌ನಿಂದ ಗೆದ್ದ ಬಂದ ಮೇಲೆ ಅವರು ಎಲ್ಲ ಜನರಿಗೂ ಸದಸ್ಯರಾಗಿರುತ್ತಾರೆ. ಈ ರೀತಿ ಹೇಳದೆ ವಾರ್ಡ್‌ನ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕು’ ಎನ್ನುತ್ತಾರೆ ವಾರ್ಡ್‌ನ ಯುವ ಮುಖಂಡ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮು ಕಲಾಲ.

‘ಹಲವಾರು ಸಮಸ್ಯೆಗಳಿದ್ದರೂ ವಾರ್ಡ್‌ ಸದಸ್ಯೆ ರುಕ್ಮಿಣಿ ಸುಣಗಾರ ಅವರು ಇತ್ತ ಸುಳಿಯುವುದಿಲ್ಲ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ, ‘ನೀವು ನನಗೆ ಮತ ನೀಡಿಲ್ಲ ಹೀಗಾಗಿ ನಿಮ್ಮ ಕೆಲಸಗಳನ್ನು ಮಾಡುವುದಿಲ್ಲವೆಂದು ಹೇಳುತ್ತಾರೆ’ ಎನ್ನುವುದು ವಾರ್ಡ್‌ನ ಬಹುತೇಕ ಜನರ ಅಭಿಪ್ರಾಯವಾಗಿದೆ ಎಂದರು.

ವಿರೋಧಿಗಳನ್ನು ಸಮಾಧಾನ ಪಡಿಸಲು ಸಾಧ್ಯವೇ?

‘ವಾರ್ಡ್‌ನ ಸಮಸ್ಯೆಗಳು ಬಂದಾಗ ಓಟು ಹಾಕಿದವರು, ಓಟು ಹಾಕದವರು ಎಂದು ಬೇಧಭಾವ ಎಣಿಸುವುದಿಲ್ಲ. ಎಲ್ಲರ ಕೆಲಸವನ್ನೂ ಮಾಡುತ್ತೇನೆ. ನಮ್ಮ ವಿರೋಧಿಗಳು ಮಾತ್ರ ಆ ರೀತಿ ಹೇಳುತ್ತಾರೆ. ವಿರೋಧಿಗಳನ್ನು ಸಮಾಧಾನಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ' ಎಂದು ವಾರ್ಡ್‌ ಸದಸ್ಯೆ ರುಕ್ಮಿಣಿ ಸುಣಗಾರ ಹೇಳಿದರು.

‘ವಾರ್ಡ್‌ನಲ್ಲಿ ನಿಯಮಿತವಾಗಿ ಸಂಚರಿಸುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನನ್ನ ಗಮನಕ್ಕೆ ಬಂದಿರುವ ಹಾಗೂ ಜನರು ನನ್ನ ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ನಿವಾರಿಸಿದ್ದೇನೆ’ ಎಂದು ವಾರ್ಡ್‌ ಅವರು ಹೇಳಿದರು.

ವಾರ್ಡ್‌ನಲ್ಲಿ ಬೀದಿನಾಯಿ ಹಾಗೂ ಹಂದಿಗಳ ಕಾಟ ವಿಪರೀತವಾಗಿದ್ದು, ಜನರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

-ಮರಿಯಮ್ಮ ಮುಖೆ, ವಾರ್ಡ್‌ನ ಮಾಜಿ ಸದಸ್ಯೆ

***

ವಾರ್ಡ್‌ನ ಸದಸ್ಯೆ ರುಕ್ಮಿಣಿ ಸುಣಗಾರ ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಾರ್ಡ್‌ನಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ನಿವಾರಿಸಬೇಕು

-ವಿಠಲ ಗಣಾಚಾರಿ, ವಾರ್ಡ್‌ನ ಮುಖಂಡ

***

ವಾರ್ಡ್‌ನ ಜನರು ನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ.

-ಮಾರುತಿ ಭಜಂತ್ರಿ, ವಾರ್ಡ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.