ADVERTISEMENT

ಲಕ್ಷ್ಮೇಶ್ವರ | ಪಾತಾಳ ಕಂಡ ಜಲಮೂಲ: ಪರದಾಟ

ಲಕ್ಷ್ಮೇಶ್ವರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ

ನಾಗರಾಜ ಎಸ್‌.ಹಣಗಿ
Published 31 ಮಾರ್ಚ್ 2024, 5:27 IST
Last Updated 31 ಮಾರ್ಚ್ 2024, 5:27 IST
<div class="paragraphs"><p>ಲಕ್ಷ್ಮೇಶ್ವರದ ನಿವಾಸಿಯೊಬ್ಬರು ತಾಲ್ಲೂಕಿನ ಅಡರಕಟ್ಟಿ ಗ್ರಾಮದಿಂದ ದೂಡುವ ಗಾಡಿಯಲ್ಲಿ ಕುಡಿಯುವ ನೀರು ತರುತ್ತಿರುವುದು</p></div>

ಲಕ್ಷ್ಮೇಶ್ವರದ ನಿವಾಸಿಯೊಬ್ಬರು ತಾಲ್ಲೂಕಿನ ಅಡರಕಟ್ಟಿ ಗ್ರಾಮದಿಂದ ದೂಡುವ ಗಾಡಿಯಲ್ಲಿ ಕುಡಿಯುವ ನೀರು ತರುತ್ತಿರುವುದು

   

ಲಕ್ಷ್ಮೇಶ್ವರ: ಭೀಕರ ಬರಗಾಲದ ಕಾರಣ ತಾಲ್ಲೂಕಿನಲ್ಲಿನ ಹಳ್ಳ-ಕೊಳ್ಳ, ಕೆರೆ-ಕಟ್ಟೆ, ಕೃಷಿಹೊಂಡ, ಚೆಕ್ ಡ್ಯಾಂಗಳು ನೀರಿಲ್ಲದೆ ಬಣಗುಡುತ್ತಿವೆ. ಇದರ ಪರಿಣಾಮ ಕೊಳವೆ ಬಾವಿಗಳಲ್ಲಿನ ಗಂಗೆ ಪಾತಾಳ ಸೇರುತ್ತಿದ್ದಾಳೆ. ಈಗಾಗಲೇ ಕೆಲ ಕೊಳವೆ ಬಾವಿಗಳೂ ಬತ್ತುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಬರ ಎದುರಾಗುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.

ಕೆರೆ, ಹಳ್ಳ, ನದಿಗಳು ಸಂಪೂರ್ಣ ಬತ್ತಿದ ಕಾರಣ ಅಂತರ್ಜಲಮಟ್ಟ ತೀವ್ರ ಕುಸಿಯುತ್ತಿದೆ. ಲಕ್ಷ್ಮೇಶ್ವರ ಸೇರಿದಂತೆ ತಾಲ್ಲೂಕಿನ ಕೆಲ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ತುಂಗಭದ್ರೆ ಬತ್ತಿದ ಕಾರಣ ಲಕ್ಷ್ಮೇಶ್ವರ ಪಟ್ಟಣ ಒಳಗೊಂಡಂತೆ ದೊಡ್ಡೂರು, ಸೂರಣಗಿ ಗ್ರಾಮಸ್ಥರಿಗೂ ನದಿ ನೀರಿನ ಬವಣೆ ಎದುರಾಗಿದೆ.

ADVERTISEMENT

ನದಿಯಲ್ಲಿ ನೀರಿಲ್ಲದ ಕಾರಣ ಒಂದು ತಿಂಗಳಿಂದ ಲಕ್ಷ್ಮೇಶ್ವರಕ್ಕೆ ನದಿ ನೀರು ಪೂರೈಕೆ ಆಗಿಲ್ಲ.ಪಟ್ಟಣದ ಸಾವಿರಾರು ನಿವಾಸಿಗಳು ಕೊಳವೆ ಬಾವಿಗಳ ನೀರನ್ನು ಆಶ್ರಯಿಸುವ ಪರಿಸ್ಥಿತಿ ಉದ್ಭವಿಸಿದೆ. ಇಲ್ಲಿಯವರೆಗೆ ನದಿ ನೀರನ್ನು ಕುಡಿದ ಜನತೆಗೆ ಕೊಳವೆ ಬಾವಿಗಳ ನೀರು ಸವುಳ ಆಗಿದೆ. ಹೀಗಾಗಿ ಕೆಲವರು ಶುದ್ಧ ಘಟಕದಿಂದ ನೀರನ್ನು ತಂದರೆ, ಇನ್ನು ಕೆಲವರು ತಾಲ್ಲೂಕಿನ ಅಡರಕಟ್ಟಿಯಲ್ಲಿ ಜೆಜೆಎಂ ಯೋಜನೆಯಡಿ ಪೂರೈಕೆ ಆಗುತ್ತಿರುವ ನದಿ ನೀರನ್ನು ಆಟೊ ಮತ್ತು ದೂಡುವ ಗಾಡಿಗಳಲ್ಲಿ ತರುತ್ತಿದ್ದಾರೆ.

ಇನ್ನು ಲಭ್ಯ ಇರುವ ಕೊಳವೆ ಬಾವಿಗಳಿಂದ ಜನತೆಗೆ ನೀರು ಪೂರೈಸಲು ಪುರಸಭೆ ಸರ್ಕಸ್ ಮಾಡುತ್ತಿದೆ. ಲಕ್ಷ್ಮೇಶ್ವರ ದೊಡ್ಡ ಪಟ್ಟಣ ಆಗಿರುವುದರಿಂದ ಕೆಲ ಭಾಗಗಳಲ್ಲಿ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಪಟ್ಟಣದಲ್ಲಿನ ಇಟ್ಟಿಗೇರಿ ಕೆರೆ, ಕೆಂಪಿಗೇರಿ ಕೆರೆ, ಮೋಟಾರ್‍ಗಟ್ಟಿ ಕೆರೆಗಳು ಖಾಲಿ ಇವೆ. ಈ ಕೆರೆಗಳು ತುಂಬಿದಾಗ ಸುತ್ತಮುತ್ತಲಿನ ನೂರಾರು ಕೊಳವೆ ಬಾವಿಗಳಲ್ಲಿ ನೀರು ಇರುತ್ತಿತ್ತು. ಆದರೆ ಇದೀಗ ಕೊಳವೆ ಬಾವಿಗಳ ನೀರೂ ಸಹ ಕಡಿಮೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಿನ್ನೂ ಬೇಸಿಗೆ ಆರಂಭವಾಗಿದ್ದು ಈಗಾಗಲೇ ನೀರಿನ ಬವಣೆ ಕಾಡುತ್ತಿದೆ. ಇನ್ನು ಬೇಗನೇ ಮಳೆ ಆಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ನೀರನ್ನು ಮಿತವಾಗಿ ಬಳಸುವಂತೆ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯಿಂದ ಸ್ವಚ್ಛವಾಹಿನಿ ಮೂಲಕ ಜಾಗೃತಿ ಮೂಡಿಸಲಾಗಿತ್ತಿದೆ

‘ನೀರಿನ ಬಳಕೆ ಕುರಿತು ಜಾಗೃತಿ:

ನೀರನ್ನು ಮಿತವಾಗಿ ಬಳಸುವಂತೆ ತಾಲ್ಲೂಕಿನ ಬಾಲೆಹೊಸೂರು, ಹುಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಡಂಗುರ ಸಾರಲಾಗುತ್ತಿದೆ. ನಳಕ್ಕೆ ಪೈಪ್ ಹಚ್ಚಿ ಬಟ್ಟೆ, ಪಾತ್ರೆ , ದನಗಳ ಮೈ ತೊಳೆಯುವುದು, ವಾಹನಗಳನ್ನು ಸ್ವಚ್ಛ ಮಾಡುವುದರ ಬದಲಾಗಿ ಬಕೆಟ್‍ನಲ್ಲಿ ನೀರು ತುಂಬಿಕೊಂಡು ನಿತ್ಯದ ಕೆಲಸಗಳನ್ನು ಮಾಡಬೇಕು ಎಂದು’ ಬಾಲೆಹೊಸೂರಿನ ಗ್ರಾಮ ಪಂಚಾಯ್ತಿ ಪಿಡಿಒ ವಡಕನಗೌಡ್ರ ಮನವಿ ಮಾಡಿದ್ದಾರೆ.

‘ಬೇಕಾಬಿಟ್ಟಿಯಾಗಿ ನೀರನ್ನು ಬಳಸದೇ ಮಿತವಾಗಿ ಬಳಸಬೇಕು. ಬಳಸಿದ ನೀರು ಹರಿದು ಹೋಗದೆ ಭೂಮಿಯಲ್ಲಿ ಇಂಗುವ ವ್ಯವಸ್ಥೆ ಮಾಡಬೇಕು. ನೀರಿನ ಕುರಿತು ಎಲ್ಲರೂ ಎಚ್ಚರ ವಹಿಸಬೇಕು’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.

ತುಂಗಭದ್ರಾ ನದಿ ನೀರು ಖಾಲಿ ಆಗಿರುವುದರಿಂದ ಕೊಳವೆ ಬಾವಿಗಳ ನೀರನ್ನು ಜನತೆಗೆ ಪೂರೈಸುತ್ತಿದ್ದೇವೆ. ಮಾರ್ಚ್ 30ರ ನಂತರ ಮತ್ತೆ ನದಿಗೆ ನೀರು ಬಿಡಲು ಅಧಿಕಾರಿಗಳು ಒಪ್ಪಿದ್ದಾರೆ. ಕೊಳವೆ ಬಾವಿಗಳಿಂದ ನೀರು ಪೂರೈಸುತ್ತೇವೆ
ಮಹೇಶ ಹಡಪದ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.