ADVERTISEMENT

ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ; ಫಲವತ್ತಾದ ಕೃಷಿ ಭೂಮಿಗೆ ಕುತ್ತು

ನರೇಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜೂನ್ 2022, 6:36 IST
Last Updated 15 ಜೂನ್ 2022, 6:36 IST
ನರೇಗಲ್ – ಗದಗ ಮಾರ್ಗದ ರಸ್ತೆ ಬದಿಯ ಹೊಲವೊಂದರಲ್ಲಿ ಅಳವಡಿಸಿರುವ ಪವನ ವಿದ್ಯುತ್ ಖಾಸಗಿ ಕಂಪನಿಯ ಫ್ಯಾನ್
ನರೇಗಲ್ – ಗದಗ ಮಾರ್ಗದ ರಸ್ತೆ ಬದಿಯ ಹೊಲವೊಂದರಲ್ಲಿ ಅಳವಡಿಸಿರುವ ಪವನ ವಿದ್ಯುತ್ ಖಾಸಗಿ ಕಂಪನಿಯ ಫ್ಯಾನ್   

ನರೇಗಲ್:‌ ಪಟ್ಟಣ ವ್ಯಾಪ್ತಿಯಲ್ಲಿ ಪವನ ವಿದ್ಯುತ್‌ ಖಾಸಗಿ ಕಂಪನಿ ಹಾವಳಿ ಹೆಚ್ಚಾಗಿದ್ದು, ಹೋಬಳಿಯ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಕರಗುತ್ತಿದೆ. ವ್ಯವಸಾಯ ಮಾಡುವ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆಯಾದರೆ ಭವಿಷ್ಯದ ಕೃಷಿ ಚಟುವಟಿಕೆ ಹಾಗೂ ಆಹಾರ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪ್ರಜ್ಞಾವಂತ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ನರೇಗಲ್‌ ವ್ಯಾಪ್ತಿಯ ಭೂಪ್ರದೇಶ ಗಜೇಂದ್ರಗಡ ಹಾಗೂ ಕಾಲಕಾಲೇಶ್ವರ ಬೆಟ್ಟದ ಎತ್ತರವನ್ನು ಹೊಂದಿದೆ. ಇಲ್ಲಿ ಗಾಳಿ ಉತ್ತಮವಾಗಿ ಬೀಸುತ್ತದೆ ಎನ್ನುವ ಕಾರಣಕ್ಕೆ ಪವನ ವಿದ್ಯುತ್‌ ಖಾಸಗಿ ಕಂಪನಿಯವರು ಫ್ಯಾನ್‌ ಅಳವಡಿಸುವ ಪ್ರಕ್ರಿಯೆಯನ್ನು ನಾಲ್ಕು ತಿಂಗಳಿಂದ ಆರಂಭಿಸಿದ್ದಾರೆ. ಇದರಿಂದಾಗಿ ಕೃಷಿ ಭೂಮಿಯನ್ನು ಪರಿವರ್ತಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಹಣದ ಆಸೆಗೆ ಫಲವತ್ತಾದ ಚೌಕಾಕಾರದ ಭೂಮಿಗಳನ್ನು ರೈತರು ನೀಡುತ್ತಿರುವ ಕಾರಣ ಅನ್ನ ನೀಡುವ ಭೂಮಿಗೆ ಗರಸು ಹಾಕಿ ಬಂಜರುಗೊಳಿಸುತ್ತಿರುವ ಪ್ರಮಾಣ ಎಗ್ಗಿಲ್ಲದೆ ಸಾಗಿದೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಮಾರಕ ಪರಿಣಾಮ ಬೀಳಲಿದೆ ಎಂದು ರೈತರಾದ ವೀರೇಶ ನೇಗಲಿ, ಶರಣಪ್ಪ ಮಡಿವಾಳರ ಕಳಕವಳ ವ್ಯಕ್ತಪಡಿಸಿದರು.

ADVERTISEMENT

ನರೇಗಲ್‌ ಪಟ್ಟಣದ ವ್ಯಾಪ್ತಿಯಲ್ಲಿ 6 ಪವನ ವಿದ್ಯುತ್‌ ಖಾಸಗಿ ಕಂಪನಿಯವರು ತಮ್ಮ ವಿದ್ಯುತ್‌ ಕಂಬಗಳನ್ನು ಅಳವಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎರಡು ಕಂಪನಿಯವರು ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ. ಉಳಿದ ನಾಲ್ಕು ಕಂಪನಿಯವರು ರೈತರೊಂದಿಗೆ ಸಮಾ ಲೋಚನೆ, ವ್ಯಾವಹಾರಿಕ ಒಪ್ಪಂದ ಹಾಗೂ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ಪರವಾನಗಿ ಪಡೆಯಲು ಮುಂದಾಗಿದ್ಧಾರೆ ಎಂದು ತಾಲ್ಲೂಕು ಕಂದಾಯ ಇಲಾಖೆಯ ಸಿಬ್ಬಂದಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಫ್ಯಾನ್‌ ಪಾಯಿಂಟ್‌ ಬಂದಿರುವ ಹೊಲದ ಒಂದು ಎಕರೆ ಭೂಮಿಯನ್ನು ಪವನ ವಿದ್ಯುತ್‌ ಖಾಸಗಿ ಕಂಪನಿಯವರು ರೈತರಿಂದ ಖರೀದಿ ಮಾಡುತ್ತಿದ್ದಾರೆ. ಜಮೀನು ರಸ್ತೆ ಬದಿ ಇದ್ದರೆ ₹10 ಲಕ್ಷ, ಸ್ವಲ್ಪ ಒಳಗೆ ಇದ್ದರೆ ₹ 5ರಿಂದ ₹ 8 ಲಕ್ಷ ಹಣ ನೀಡುತ್ತಿದ್ದಾರೆ. ಅದರ ಸುತ್ತಲಿನ ಐದು ಎಕರೆ ಕೃಷಿ ಭೂಮಿಯನ್ನು ವರ್ಷಕ್ಕೆ ₹ 15 ಸಾವಿರದಂತೆ 30 ವರ್ಷಕ್ಕೆ ಲಾವಣಿ ಪಡೆಯುತ್ತಿದ್ದಾರೆ. ಪ್ರತಿ ಫ್ಯಾನ್‌ ಕಂಬಕ್ಕೂ ಸಂಪರ್ಕ ಕಲ್ಪಿಸಲು 30 ಮೀಟರ್‌ ಅಗಲದ ಭೂಮಿಯನ್ನು ದಾರಿಗೆ ಪಡೆಯುತ್ತಿದ್ದಾರೆ. ಕಾರಣ ದೊಡ್ಡ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿ ಎಂದು ರಸ್ತೆಯ ಜಾಗವನ್ನು ₹1 ಲಕ್ಷಕ್ಕೆ (ಭೂಮಿ ಮೇಲೆ ಅವಲಂಬನೆ) ಖರೀದಿ ಮಾಡುತ್ತಿದ್ದಾರೆ. ಎಲ್ಲಾ ಪ್ರಕ್ರಿಯೆಯನ್ನು ನೋಂದಣಿಯ ಇಲಾಖೆಯಲ್ಲಿ ಕಂಪನಿಯ ಮೂರನೇ ಮಧ್ಯವರ್ತಿ ಹೆಸರಿನಲ್ಲಿ ಖರೀದಿ ಮಾಡುತ್ತಿದ್ದಾರೆ.

ಒಂದೇ ಬಾರಿಗೆ ₹20 ಲಕ್ಷದಿಂದ ₹30 ಲಕ್ಷ ಹಣ ಸಿಗುತ್ತದೆ ಎಂದು ಕೃಷಿ ಭೂಮಿಯನ್ನು ನೀಡುತ್ತಿರುವ ರೈತರು ಈಗಾಗಲೇ ಹಣ ಖರ್ಚು ಮಾಡಿಕೊಂಡು ಪೇಚಾಡುತ್ತಿದ್ದಾರೆ. ಈ ಬಾರಿಯ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳ ಪ್ರಮಾಣ ಕಡಿಮೆಯಾಗಿದೆ. ಹೊಲವನ್ನು ಬಿತ್ತುವರ ಹಾಗೂ ರಂಟೆ ಹೊಡೆಯುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಹಿರಿಯ ರೈತ ಬಸಪ್ಪ ತಳವಾರ ಹೇಳಿದರು.

700 ಫ್ಯಾನ್‌ ಅಳವಡಿಕೆ?

ನರೇಗಲ್‌ ಹೋಬಳಿಯ ಭೂಪ್ರದೇಶದಲ್ಲಿ ಅಂದಾಜು 700 ಪವನ ವಿದ್ಯುತ್‌ ಫ್ಯಾನ್‌ ಅಳವಡಿಸುವ ಯೋಜನೆ ಇರುವ ಕಾರಣ ಅಂದಾಜು ಮೂರು ಸಾವಿರ ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿ ನರೇಗಲ್‌ ವ್ಯಾಪ್ತಿಯಲ್ಲಿ ಕಾಣೆಯಾಗಲಿದೆ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಒಮ್ಮೆ ಭೂಮಿ ಕಳೆದುಕೊಂಡರೆ ಮತ್ತೆ ದೊರೆಯಲಾರದು ಎಂದು ಕೃಷಿಯಲ್ಲಿ ಆಸಕ್ತಿ ಹೊಂದಿರುವ ಕೆಲವು ಪ್ರಗತಿಪರ ರೈತರು ಆತಂಕ ವ್ಯಕ್ತಪಡಿಸುತ್ತಾರೆ.

* ಫಲವತ್ತಾದ ಕೃಷಿ ಭೂಮಿಯಲ್ಲಿ ಫ್ಯಾನ್‌ ಹಾಗೂ ಸೋಲಾರ್‌ ಅಳವಡಿಸುವುದು ಅಪರಾಧವಾಗಿದೆ. ಭವಿಷ್ಯದ ಪೀಳಿಗೆಗೆ ತಿನ್ನಲು ಆಹಾರವಿಲ್ಲದಂತೆ ಮಾರಕ ಪರಿಣಾಮ ಬೀರಲಿದೆ
-ಚಂದ್ರಹಾಸ ಶಂಕ್ರಪ್ಪ ಇಲ್ಲೂರ, ಹಿರಿಯ

* ಗಿಡಮರ ಹಾಗೂ ವನ್ಯಜೀವಿಗಳ ಬದುಕಿಗೆ ತೊಂದರೆಯಾದರೆ ಜೀವವೈವಿಧ್ಯತೆಯ ಮೇಲೆ ದುಷ್ಪರಿಣಾಮ ಬೀರಲಿದೆ.
-ಮಂಜನಾಥ ನಾಯಕ, ಜೀವವೈವಿಧ್ಯ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.