ADVERTISEMENT

ಜಿಂದಾಲ್‌ಗೆ ಭೂಮಿ ಪರಭಾರೆ ನಿರ್ಣಯ ರದ್ದು– ಹೋರಾಟಕ್ಕೆ ಸಂದ ಜಯ: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಮೇ 2021, 16:01 IST
Last Updated 27 ಮೇ 2021, 16:01 IST
   

ಗದಗ: ‘ಜಿಂದಾಲ್ ಕಂಪನಿಗೆ ರಿಯಾಯಿತಿ ದರದಲ್ಲಿ ಭೂಮಿ ಪರಭಾರೆ ಮಾಡದಿರುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದ್ದು, ಇದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಜನರಿಗೆ ಸಂದ ಜಯ’ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ಗುರುವಾರ ವಿಡಿಯೊ ಹೇಳಿಕೆ ನೀಡಿರುವ ಅವರು, ‘ಸರ್ಕಾರ ಮೊದಲು ಭೂಮಿ ನೀಡಲು ಒಪ್ಪಿಗೆ ನೀಡಿ ಈಗ ಈ ನಿರ್ಣಯದಿಂದ ಹಿಂದೆ ಸರಿದಿರುವ ಕುರಿತು ರಾಜ್ಯದ ಜನತೆಗೆ ವಿವರಣೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ಮೊದಲು ಬಿಜೆಪಿ ಸರ್ಕಾರವು ಜಿಂದಾಲ್‌ಗೆ 3,665 ಎಕರೆ ಭೂಮಿಯನ್ನು ರಿಯಾಯತಿ ದರದಲ್ಲಿ ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ನಿರ್ಣಯ ಕೈಗೊಂಡಿತ್ತು. ಆದರೆ, ಇಂದು ಮತ್ತೆ ಈ ನಿರ್ಣಯ ಹಿಂಪಡೆದಿದೆ. ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತವಿದ್ದ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ನಾನು ಇದನ್ನು ವಿರೋಧ ಮಾಡಿದ್ದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಂದು ಬಿಜೆಪಿಯ ನಾಯಕರು, ಇಂದಿನ ಸಿಎ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಗಲು, ರಾತ್ರಿ ಹೋರಾಟ, ಚಳವಳಿ, ಪ್ರತಿಭಟನೆ ನಡೆಸಿದ್ದರು. ನಿರ್ಣಯ ರದ್ದಾಗುತ್ತಿದ್ದಂತೆ ಜನರಿಂದ ಅಭಿನಂದನೆ ಪಡೆದಿದ್ದರು. ಆದರೆ, ಸದ್ಯ ಅವರೇ ಜಿಂದಾಲ್ ಕಂಪನಿಗೆ ಜಾಗ ನೀಡಲು ನಿರ್ಣಯ ತೆಗೆದುಕೊಂಡು, ನಂತರ ರದ್ದು ಮಾಡಿದ್ದಾರೆ’ ಎಂದು ಕುಟುಕಿದ್ದಾರೆ.

ಆದರೆ, ಅಂದು ಜಿಂದಾಲ್‌ಗೆ ಭೂಮಿ ನೀಡಲು ನಿರ್ಣಯ ತೆಗೆದುಕೊಂಡ ಬಗ್ಗೆ ಹಾಗೂ ಇಂದು ಅದನ್ನು ಮತ್ತೆ ರದ್ದು ಮಾಡಿರುವ ಕುರಿತು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾಗೂ ಸಿಎಂ ಅವರು ಜನರಿಗೆ ವಿವರಣೆ ನೀಡಬೇಕು. ಯಾವ ಕಾರಣಕ್ಕೆ ಅದನ್ನು ಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸದ್ಯ ಯಾವ ಕಾರಣಕ್ಕೆ ನಿರ್ಣಯ ಹಿಂಪಡೆಯಲಾಗಿದೆ ಎಂದು ಜನರಿಗೆ ಬಹಿರಂಗವಾಗಿ ತಿಳಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

‘ಜಿಂದಾಲ್ ಕಂಪನಿಯು ಸರ್ಕಾರ ಹಾಗೂ ಸರ್ಕಾರದ ಅಂಗ ಸಂಸ್ಥೆಗಳಿಗೆ ₹2 ಸಾವಿರ ಕೋಟಿ ಬಾಕಿ ಹಣ ನೀಡಬೇಕು. ಇಷ್ಟಿದ್ದರೂ ಆ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ಮಾಡಲು ಯಾವ ಕಾರಣಕ್ಕೆ ಮುಂದಾಗಿತ್ತು? ಇದನ್ನು ಜನರಿಗೆ ಹೇಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.