ADVERTISEMENT

ಜೀವನಶೈಲಿಯಲ್ಲಿ ಹೃದಯದ ಆರೋಗ್ಯ

ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜಗದೀಶ ನುಚ್ಚಿನ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 3:49 IST
Last Updated 30 ಸೆಪ್ಟೆಂಬರ್ 2021, 3:49 IST
ವಿಶ್ವ ಹೃದಯ ದಿನ ಅಂಗವಾಗಿ ಗದುಗಿನ ಹಮಾಲರ ಕಾಲೊನಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಉದ್ಘಾಟಿಸಿದರು. ಡಾ.ಜಗದೀಶ್‌ ನುಚ್ಚಿನ, ಡಾ. ಎಸ್‌.ಎಸ್‌.ನೀಲಗುಂದ ಇದ್ದಾರೆ
ವಿಶ್ವ ಹೃದಯ ದಿನ ಅಂಗವಾಗಿ ಗದುಗಿನ ಹಮಾಲರ ಕಾಲೊನಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಉದ್ಘಾಟಿಸಿದರು. ಡಾ.ಜಗದೀಶ್‌ ನುಚ್ಚಿನ, ಡಾ. ಎಸ್‌.ಎಸ್‌.ನೀಲಗುಂದ ಇದ್ದಾರೆ   

ಗದಗ: ‘ಹೃದಯದಿಂದ ಬಾಂಧವ್ಯ ಬೆಳೆಸೋಣ’ ಎಂಬುದು ವಿಶ್ವ ಹೃದಯ ದಿನದ ಈ ವರ್ಷದ ಘೋಷವಾಕ್ಯವಾಗಿದ್ದು, ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ಸಾಕಷ್ಟು ಸಾವುನೋವುಗಳನ್ನು ತಡೆಗಟ್ಟಬಹುದು’ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಜಗದೀಶ ನುಚ್ಚಿನ ಹೇಳಿದರು.

ವಿಶ್ವ ಹೃದಯ ದಿನ ಅಂಗವಾಗಿ ನಗರದ ವಾರ್ಡ್‌ ನಂಬರ್‌ 11ರ ಹಮಾಲರ ಕಾಲೊನಿಯಲ್ಲಿ ಬುಧವಾರ ಜಿಲ್ಲಾಡಳಿತ, ಶರಣಪ್ಪ ಗೊಳಗೊಳಕಿ ಅಭಿಮಾನಿ ಬಳಗ, ಸೃಷ್ಟಿ ಸಂಕುಲ ಆರೋಗ್ಯ ಮತ್ತು ಸಮಾಜಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಬಹಳಷ್ಟು ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ, 30 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಬಾರಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಉತ್ತಮ’ ಎಂದು ಸಲಹೆ ನೀಡಿದರು.

ADVERTISEMENT

‘ವಿಶ್ವದಲ್ಲಿ ಅತಿ ಹೆಚ್ಚು ಜನರುಹೃದಯ ಸಂಬಂಧಿ ಕಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ 1 ಸಾವಿರ ಜನಸಂಖ್ಯೆಯಲ್ಲಿ 37 ಮಂದಿ ಹೃದಯ ಸಂಬಂಧಿ ಕಾಯಿಲೆಯಿಂದ, 159 ಜನರು ರಕ್ತದೊತ್ತಡ, 67 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ತಂಬಾಕು ಸೇವನೆ, ಅತಿಯಾದ ಮದ್ಯಪಾನ, ಅಸಮರ್ಪಕ ಆಹಾರ ಸೇವನೆ, ದೈಹಿಕ ಚಟುವಟಿಕೆಗಳು ಇಲ್ಲದಿರುವುದೇ ಅಸಾಂಕ್ರಾಮಿಕ ಕಾಯಿಲೆಗಳಿಗೆ ಮುಖ್ಯ ಕಾರಣ‌’ ಎಂದು ನುಡಿದರು.

‘ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತಿ ಗ್ರಾಮಗಳಲ್ಲಿ ನಡೆಸಲಾಗುತ್ತಿದ್ದು, ಒಟ್ಟು 7 ಎನ್‌ಸಿಡಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ, ಔಷಧ ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ಇದೇ ವೇಳೆ, ವಾರ್ಡ್‌ ನಂ. 11ರ ನಿವಾಸಿಗಳಿಗೆ ಕೋವಿಡ್-19 ನಿರೋಧಕ ಲಸಿಕೆ ಹಾಕಲಾಯಿತು. ಜತೆಗೆ ಅಸಾಂಕ್ರಾಮಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಮಧುಮೇಹ, ರಕ್ತದೊತ್ತಡ ತಪಾಸಣೆ ಮಾಡಲಾಯಿತು. ಜಿಲ್ಲಾ ತಂಬಾಕು ಕೋಶದ ವತಿಯಿಂದ ತಂಬಾಕು ವ್ಯಸನಿಗಳಿಗೆ ಉಚಿತ ಆಪ್ತಸಮಾಲೋಚನೆ, ಎಚ್‌ಐವಿ ಕುರಿತು ಆಪ್ತಸಮಾಲೊಚನೆ ಮಾಡಲಾಯಿತು.

ಸಾಮಾಜಿಕ ಕಾರ್ಯಕರ್ತಶರಣಪ್ಪ ಗೊಳಗೊಳಕಿ,ರಮೇಶ ಚಲವಾದಿ, ಹಿರಿಯರಾದ ಸಿದ್ದಪ್ಪ ನಾಗೂರ, ಜಿಲ್ಲಾ ವಿಬಿಡಿಸಿಪಿ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ, ಡಾ.ರವಿ ಕೆ., ಡಾ. ಪ್ರವೀಣ ಎನ್., ಡಾ. ಶ್ವೇತಾ ಇದ್ದರು.

‘ಉತ್ತಮ ಆರೋಗ್ಯವೂ ಸಮಾಜಕ್ಕೆ ಕೊಡುಗೆಯೇ’

‘ಹೃದಯ ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ದೇಹದ ಪ್ರತಿಯೊಂದು ಅಂಗಗಳಿಗೆ ರಕ್ತ, ಆಮ್ಲಜನಕ ಪೂರೈಸುವ ಮೂಲಕ ಎಲ್ಲ ಅಂಗಗಳನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಉತ್ತಮ ಜೀವನಶೈಲಿ ಹೊಂದುವ ಮೂಲಕ ಹೃದಯದ ಕಾಳಜಿ ಮಾಡಬೇಕು. ನಾವು ಆರೋಗ್ಯವಾಗಿರುವುದೇ ಈ ಸಮಾಜಕ್ಕೆ ನೀಡುವ ಕೊಡುಗೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.