ಪ್ರಜಾವಾಣಿ ವಾರ್ತೆ
ನರಗುಂದ: ‘ಆರ್ಥಿಕತೆಯಲ್ಲಿ ಭಾರತ ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ಮೂರನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಜನರ ಬದುಕನ್ನು ಅಭಿವೃದ್ಧಿಪಡಿಸುತ್ತಿವೆ. ವಿಶ್ವವೇ ಭಾರತದತ್ತ ತಿರುಗಿ ನೋಡುವಷ್ಟು ಭಾರತ ವೈಭವದಿಂದ ಬೆಳೆಯುತ್ತಿದೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪಿದ ಕ್ರಾಂತಿಕಾರಿ ಹೋರಾಟಗಾರರ ಸ್ಮರಣೆ ಮಾಡಬೇಕು. ದೇಶಭಕ್ತಿ, ದೇಶಪ್ರೇಮ ಮೆರೆದು ಸ್ವಾತಂತ್ರ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ‘ಸರ್ಕಾರದ ಜನಪರ ಯೋಜನೆಗಳ ಸದುಪಯೋಗ ಪಡೆದುಕೊಂಡು ದೇಶದ ಉತ್ತಮ ಪ್ರಜೆಗಳಾಗಿ, ನೆಲದ ಸಂಸ್ಕೃತಿ ಮರೆಯದೇ ಸಾಗಬೇಕು’ ಎಂದರು.
ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಹಲೀಮಾ ಖಡ್ಡೇಗಾರ ಭಾಷಣ ಜನಮನ ಸೆಳೆಯಿತು. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಗವಿಕಲ ಹಾಗೂ ಹಿರಿಯ ನಾಗರಿಕರಿಗೆ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಯಿತು. ಐದು ಅಂಗವಿಕಲ ವಿದ್ಯಾರ್ಥಿಗಳಿಗೆ ಸಾಧನಾ ಸಲಕರಣೆ ವಿತರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ಲ, ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಎಸ್.ಆರ್. ಪಾಟೀಲ, ತಾ.ಪಂ ಇಒ ಎಸ್.ಕೆ. ಇನಾಮದಾರ, ಬಿಇಒ ಬಿ.ಎಫ್ ಮಜ್ಜಗಿ, ಸಿಪಿಐ ಮಂಜುನಾಥ ನಡುವಿನಮನಿ, ಇತರರು ಇದ್ದರು.
ಗ್ರಾಹಕರ ವಿತರಕರ ಸಂಘ: ಇಲ್ಲಿನ ಗಾಂಧಿ ವೃತ್ತದಲ್ಲಿ ಗ್ರಾಹಕರ ವಿತರಕರ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ರಾಜು ಅಂಗಡಿ , ಮಲ್ಲಪ್ಪ ಬಳ್ಳಾರಿ, ಚನ್ನು ನಂದಿ, ಕೃಷ್ಣಾ ಮಾಳದಕರ, ವಿಠಲ ಜಾಧವ ಇದ್ದರು.
ನರಗುಂದದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಸುರೇಶ ವಿ. ಬೋನಗೇರಿ, ರಾಜು ಕಲಾಲ ಇದ್ದರು.
ನರಗುಂದದ ಚಿನ್ನಾಂಬಿಕಾ ಪ್ಯಾರಾ ಮೆಡಿಕಲ್ ಸಂಸ್ಥೆಯಲ್ಲಿ ನಿರ್ದೇಶಕ ನಾಗೇಶ ಅಪ್ಪೋಜಿ ಧ್ವಜಾರೋಹಣ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.