ADVERTISEMENT

ಗದಗ: ಐತಿಹಾಸಿಕ ದೇವಸ್ಥಾನದ ಮೇಲೆ ‘ಎಂಐಎಂ’ ಬರಹ

ಕಿಡಿಗೇಡಿಗಳನ್ನು ಬಂಧಿಸುವಂತೆ ಶ್ರೀರಾಮ ಸೇನೆ, ವಿಎಚ್‌ಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 14:53 IST
Last Updated 26 ಆಗಸ್ಟ್ 2020, 14:53 IST
ಐತಿಹಾಸಿಕ ದೇಗುಲದ ಬಳಿಯಲ್ಲಿ ಬರೆದಿರುವ ಬರಹ
ಐತಿಹಾಸಿಕ ದೇಗುಲದ ಬಳಿಯಲ್ಲಿ ಬರೆದಿರುವ ಬರಹ   

ಗದಗ: ನಗರದ ಸೋಮೇಶ್ವರ ದೇವಸ್ಥಾನದ ಆವರಣ ಗೋಡೆ ಮೇಲೆ ಕಿಡಿಗೇಡಿಗಳು ‘ಎಂಐಎಂ’ ಎಂದು ಬರೆದಿದ್ದು, ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಶ್ರೀರಾಮಸೇನೆಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜು ಖಾನಾಪುರ ಆಗ್ರಹಿಸಿದ್ದಾರೆ.

ಈ ಕೃತ್ಯ ಮಂಗಳವಾರ ರಾತ್ರಿ ನಡೆದಿರುವ ಶಂಕೆ ಇದೆ. ಸೋಮೇಶ್ವರ ದೇವಸ್ಥಾನ ಕಾಂಪೌಂಡ್‌ ಅಷ್ಟೇ ಅಲ್ಲದೇ ನೀರಿನ ಟ್ಯಾಂಕ್‌, ಹಿಟ್ಟಿನ ಗಿರಣಿ, ಓಣಿಯಲ್ಲಿರುವ ಮನೆ ಬಾಗಿಲುಗಳ ಮೇಲೂ ‘ಎಂಐಎಂ’ ಎಂದು ಬರೆದಿದ್ದಾರೆ. ಊರ ಹೊರಗೆ ಇರುವ ಸೇತುವೆ ಮೇಲೂ ಈ ರೀತಿಯ ಬರಹ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

‘ಇತಿಹಾಸ ಪ್ರಸಿದ್ಧ ದೇವಸ್ಥಾನಗಳಿಗೆ ರಕ್ಷಣೆ ಒದಗಿಸಬೇಕು. ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

‘ಸಾರ್ವಜನಿಕ ಸ್ಥಳ ಹಾಗೂ ದೇವಸ್ಥಾನದಲ್ಲಿ ಎಂಐಎಂ ಎಂದು ಬರೆದಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ’ ಎಂದು ಎಸ್‌ಪಿ ಯತೀಶ್‌ ಎನ್‌. ಹೇಳಿದ್ದಾರೆ.

‘ಎಂಐಎಂ ಅಂದರೆ ಏನು ಅಂತ ಗೊತ್ತಿಲ್ಲ. ಬರೆದವರೂ ಯಾರು ಅಂತ ಕೂಡ ತಿಳಿದು ಬಂದಿಲ್ಲ. ಸುತ್ತಮುತ್ತ ಇರುವ ಸಿಸಿಟಿವಿಗಳ ಫೂಟೇಜ್‌ ಹಾಗೂ ಅಕ್ಕಪಕ್ಕದವರನ್ನು ವಿಚಾರಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಗರದಲ್ಲಿ ಇದೇ ಮೊದಲ ಬಾರಿಗೆ ಎಂಐಎಂ ಹೆಸರು ಕಾಣಿಸಿಕೊಂಡಿದೆ. ಇಲ್ಲಿ ಈ ಹೆಸರಿನ ಸಂಘಟನೆ ಇದೆಯೋ; ಇಲ್ಲವೋ ತಿಳಿದಿಲ್ಲ. ಈ ಬರಹದಲ್ಲಿ ಮತೀಯ ಭಾವನೆ ಕೆರಳಿಸುವ ಉದ್ದೇಶ ಇದೆಯೇ ಎಂಬುದು ಕೂಡ ತಿಳಿದು ಬಂದಿಲ್ಲ. ಎಲ್ಲವೂ ಕಲ್ಪನೆ ಅಷ್ಟೇ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.