ಗದಗ: ‘ಗ್ರಾಮಾಭಿವೃದ್ಧಿಗೆ ಕೆಳ ಹಂತದ ವಾರ್ಷಿಕ ಯೋಜನೆಗಳು ಅತ್ಯಂತ ಸಹಕಾರಿ. ಸರಿಯಾದ ಯೋಜನೆಗಳನ್ನು ರೂಪಿಸುವುದರಿಂದ ಗ್ರಾಮಗಳಲ್ಲಿ ಮಹತ್ತರ ಅಭಿವೃದ್ಧಿ ಸಾಧಿಸಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಕೆಳಹಂತದ ಯೋಜನೆಗಳೊಂದಿಗೆ ವಾರ್ಷಿಕ ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅಪಾರ ಅನುಭವ ಇದೆ. ಅಭಿವೃದ್ಧಿ ವಿಚಾರದಲ್ಲಿನ ಅವರ ಮುಂದಾಲೋಚನೆ ಉತ್ಕೃಷ್ಟವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಆರ್. ಪಾಟೀಲ ಅವರನ್ನು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ’ ಎಂದರು.
‘ವಾರ್ಡ್, ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಗ್ರಾಮದಲ್ಲಿ ಅಗತ್ಯವಾಗಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಕುರಿತು ಯೋಜನಾ ವರದಿ ಕರಡು ಸಿದ್ದಪಡಿಸಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರಕ್ಕೆ ಕಳುಹಿಸಿ ಆದ್ಯತೆ ಆಧಾರದಲ್ಲಿ ಗ್ರಾಮಗಳ ಯೋಜನೆಗಳ ಅನುಷ್ಠಾನಕ್ಕೆ ಇದು ಸಹಕಾರಿ ಆಗಲಿದೆ. ಇದೊಂದು ಉತ್ತಮ ಕಾರ್ಯ’ ಎಂದು ತಿಳಿಸಿದರು.
ಹುಬ್ಬಳ್ಳಿಯ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಅಶೋಕ ಮಂದಾಲಿ, ಸುಜಾತಾ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ಎ.ಎ.ಕಂಬಾಳಿಮಠ, ಎಂ.ವಿ.ಚಳಗೇರಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಕಾರ್ಯಾಗಾರದಲ್ಲಿ ಇದ್ದರು.
ಡಿ.ಆರ್. ಪಾಟೀಲರ ಅಪಾರ ಅನುಭವದಿಂದ ವಿಕೇಂದ್ರೀಕರಣ ವ್ಯವಸ್ಥೆ ಹಾಗೂ ಯೋಜನೆ ತಯಾರಿಕೆ ಕರಡು ಪ್ರತಿ ಈಗಾಗಲೇ ಗದಗ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಇದೇ ರೀತಿ ಮೈಸೂರು ಜಿಲ್ಲೆಯಲ್ಲಿ ಸಹ ಅಭಿವೃದ್ಧಿ ಯೋಜನೆಯ ಕರಡು ತಯಾರಿಸಲಾಗುವುದು.– ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
ಆರ್ಥಿಕ ಸದೃಢತೆ ಸಹಕಾರಿ: ಡಿ.ಆರ್. ಪಾಟೀಲ
‘ವಿಕೇಂದ್ರೀಕರಣ ವ್ಯವಸ್ಥೆ ಗ್ರಾಮ ಮಟ್ಟದಿಂದ ಬಲವರ್ಧನೆಯಾಗಬೇಕು. ಆಗ ಮಾತ್ರ ಗ್ರಾಮಗಳು ಅಭಿವೃದ್ಧಿಯೊಂದಿಗೆ ಆರ್ಥಿಕ ಸದೃಢತೆ ಸಾಧಿಸಲಿವೆ’ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.
‘ರಾಜ್ಯದ ಎಲ್ಲ ಗ್ರಾಮಗಳಲ್ಲೂ ಸಹ ವಾರ್ಷಿಕ ಅಭಿವೃದ್ಧಿ ಯೋಜನೆಗಳ ಕರಡುಪ್ರತಿ ತಯಾರಿಸಿ ಮುಂದಿನ ಹಂತಕ್ಕೆ ಕಳುಹಿಸಿಕೊಡಬೇಕು. ಅದನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.