ADVERTISEMENT

ಲಕ್ಷ್ಮೇಶ್ವರ | ರಸ್ತೆ, ಚರಂಡಿ ಕಾಣದ ಯತ್ತಿನಹಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:55 IST
Last Updated 15 ಅಕ್ಟೋಬರ್ 2025, 5:55 IST
ಲಕ್ಷ್ಮೇಶ್ವರ ತಾಲ್ಲೂಕು ಯತ್ತಿನಹಳ್ಳಿ ಗ್ರಾಮದ ಎರಡನೇ ವಾರ್ಡ್‍ನಲ್ಲಿನ ಮುಖ್ಯ ರಸ್ತೆ ಸ್ಥಿತಿ
ಲಕ್ಷ್ಮೇಶ್ವರ ತಾಲ್ಲೂಕು ಯತ್ತಿನಹಳ್ಳಿ ಗ್ರಾಮದ ಎರಡನೇ ವಾರ್ಡ್‍ನಲ್ಲಿನ ಮುಖ್ಯ ರಸ್ತೆ ಸ್ಥಿತಿ   

ಲಕ್ಷ್ಮೇಶ್ವರ: ತಾಲ್ಲೂಕಿನ ಮಾಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯತ್ತಿನಹಳ್ಳಿ ಗ್ರಾಮ ಮೂಲ ಸೌಲಭ್ಯಗಳಿಂದ ನರಳುತ್ತಿದೆ.

ವಿಶೇಷವಾಗಿ ಗುಂಜಳ ಕಡೆಗೆ ಹೋಗುವ ಮುಖ್ಯ ರಸ್ತೆಯಿಂದ ಎರಡನೇ ವಾರ್ಡ್‍ನಲ್ಲಿ ನಿರ್ಮಾಣ ಆಗುತ್ತಿರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗುವ ದಾರಿ ಸಂಪೂರ್ಣ ಕಚ್ಚಾ ರಸ್ತೆ ಆಗಿದೆ. ಅಲ್ಲದೆ ಈ ಭಾಗದಲ್ಲಿ ಚರಂಡಿ ಕೂಡ ನಿರ್ಮಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಚರಂಡಿ ಇಲ್ಲದ ಕಾರಣ ಹೊಲಸು ನೀರು ಕಚ್ಚಾ ರಸ್ತೆ ಮೇಲೆ ಹರಿಯುತ್ತಿದೆ. ನಿವಾಸಿಗಳು ಪ್ರತಿನಿತ್ಯ ಗಲೀಜು ತುಳಿದಾಡಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಅಲ್ಲದೆ ಬಳಕೆ ಮಾಡಿದ ಮಲಿನ ನೀರು ಸಹ ರಸ್ತೆ ಮೇಲೆ ಹರಿಯುವುದರಿಂದ ಇಲ್ಲಿ ಯಾವಾಗಲೂ ಗಬ್ಬು ವಾಸನೆ ಬರುತ್ತಿದ್ದು ಅದರೊಂದಿಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿ ಅವುಗಳ ಕಡಿತಕ್ಕೆ ಜನರು ಹೈರಾಣಾಗಿದ್ದಾರೆ.

ADVERTISEMENT

ಇನ್ನು ಈ ಭಾಗದಲ್ಲಿ ಈಗಲೂ ಕೆಲವರು ಗುಡಿಸಲು ಮತ್ತು ತಗಡಿನ ಶೆಡ್‍ಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಸೇರಿದ್ದು. ಆದರೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗುಡಿಸಲು ವಾಸಿಗಳು ಹೇಳುತ್ತಾರೆ.

ನರೇಗಾ ಯೋಜನೆಯಡಿ ಚರಂಡಿ ನಿರ್ಮಿಸಲು ಅವಕಾಶ ಇದೆ. ಆದರೆ ಯೋಜನೆಯಡಿ ಈಗಾಗಲೇ ಗ್ರಾಮದಲ್ಲಿ ನಿರ್ಮಿಸಿರುವ ಕಾಮಗಾರಿಗಳ ಬಿಲ್ ಇನ್ನೂ ಗುತ್ತಿಗೆದಾರರಿಗೆ ಪಾವತಿ ಆಗಿಲ್ಲ. ಇದರಿಂದಾಗಿ ಹೊಸ ಕೆಲಸ ಮಾಡಲು ಅವರು ಮುಂದೆ ಬರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ಹೇಳಿದರು.

‘ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದು ಗುಡಿಸಲು ವಾಸಿಗಳಿಗೆ ಸರ್ಕಾರದ ಯೋಜನೆಯಡಿ ಆಧ್ಯತೆ ಮೇರೆಗೆ ಪಕ್ಕಾ ಮನೆಗಳನ್ನು ಕಟ್ಟಿಸಿಕೊಡಲು ಠರಾವು ತೆಗೆದುಕೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಮಲ್ಲೂರ ತಿಳಿಸಿದರು.

ಮದ್ಲ ನಮ್ಮ ಓಣ್ಯಾಗ ಗಟಾರ ಕಟ್ಟಸ್ರೀ. ಇಲ್ಲಾಂದ್ರ ಗುಂಗಾಡ ಕಾಟಕ್ಕ ನಮಗ ರೋಗ ಬರ್ತಾವು
- ಬಸಪ್ಪ, ನಿವಾಸಿ
ಸರ್ಕಾರದಿಂದ ಬರುವ ಅನುದಾನದಲ್ಲಿ ಆದ್ಯತೆ ಮೇರೆಗೆ ಯತ್ತಿನಹಳ್ಳಿಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳತ್ತೇವೆ
- ಎಂ.ಎನ್. ಮಲ್ಲೂ, ಪಿಡಿಒ ಮಾಡಳ್ಳಿ
ಲಕ್ಷ್ಮೇಶ್ವರ ತಾಲ್ಲೂಕು ಯತ್ತಿನಹಳ್ಳಿ ಗ್ರಾಮದ ಎರಡನೇ ವಾರ್ಡ್‍ನಲ್ಲಿನ ಗುಡಿಸಲುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.