
ಗದಗ: ‘ಒತ್ತಡದ ಜೀವನದಲ್ಲಿ ಜನರು ಆರೋಗ್ಯ ಕಾಳಜಿ ಮರೆಯುತ್ತಿದ್ದಾರೆ. ಪ್ರತಿದಿನ 30 ನಿಮಿಷ ಯೋಗ, ಧ್ಯಾನ, ಪ್ರಾರ್ಥನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದುವುದರ ಜತೆಗೆ ರೋಗದಿಂದ ದೂರ ಉಳಿಯಲು ಸಾಧ್ಯ’ ಎಂದು ಹುಲಕೋಟಿ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ. ಸತೀಶ್ ಹೊಂಬಾಳಿ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಲಿಂ. ಬಸಟೆಪ್ಪ ಪರಪ್ಪ ಸುರಕೋಡ, ಲಿಂ. ದಾನಪ್ಪ ಬಸಪ್ಪ ತಡಸದ, ಲಿಂ. ಗುರುಪಾದಪ್ಪ ಪರಪ್ಪ ಉಮಚಗಿ, ದಿ. ದಾಮೋದರದಾಸ ಬಾಹುದಾಸ ಪುಣೇಕರ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸದಲ್ಲಿ ‘ಯೋಗದಿಂದ ಆರೋಗ್ಯ’ ವಿಷಯ ಕುರಿತು ಮಾತನಾಡಿದರು.
ವ್ಯಕ್ತಿಯ ದೇಹವು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿರಬೇಕು. ವ್ಯಾಪಾರಕ್ಕೆ ಎಷ್ಟು ಒತ್ತು ಕೊಡುತ್ತೀರೋ; ಅಷ್ಟೇ ಒತ್ತನ್ನು ಆರೋಗ್ಯ ಕಾಳಜಿಗೂ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡಿ, ‘ನಾವು ವ್ಯಾಪಾರಸ್ಥರು ವ್ಯಾಪಾರದ ಕಡೆಗೆ ಲಕ್ಷ್ಯ ಹೆಚ್ಚು ಕೊಡುತ್ತೇವೆ. ಆರೋಗ್ಯದ ಕಡೆಗೂ ಒತ್ತು ನೀಡಬೇಕು’ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ನಂದಾ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ‘ನಾವು ಮೊದಲು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಂತರ ಉದ್ಯೋಗ ಮಾಡಬೇಕು. ಒತ್ತಡದ ಜೀವನದಿಂದ ಹೊರ ಬರಲು ಯೋಗ ಮತ್ತು ವ್ಯಾಯಾಮದ ಕಡೆಗೆ ಗಮನ ನೀಡಬೇಕು’ ಎಂದು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ನಿರೂಪಣೆ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಜಯದೇವ ಎಂ. ಮೆಣಸಗಿ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್. ಕಾಲವಾಡ ಪರಿಚಯಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಎಸ್. ಉಗಲಾಟದ ವಂದಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸದಸ್ಯರು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.