ಲಕ್ಷ್ಮೇಶ್ವರ: ‘ಪ್ರಸ್ತುತ ದಿನಗಳಲ್ಲಿ ಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರು ಹೋಗುವುದು ಹೆಚ್ಚಾಗಿದೆ. ಇದರಿಂದಾಗಿ ದೇಶದಲ್ಲಿ ಅನಾಥಾಶ್ರಮಗಳ ಸಂಖ್ಯೆಗಳು ಕೂಡ ಹೆಚ್ಚಾಗುತ್ತಿವೆ’ ಎಂದು ಭೈರನಹಟ್ಟಿ ವೀರಕ್ತಮಠದ ದೊರೆಸ್ವಾಮಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಭಾನುವಾರ ನಡೆದ ನಿವೃತ್ತ ಶಿಕ್ಷಕಿ ಸಾವಿತ್ರಮ್ಮ ಶಂಕ್ರಪ್ಪ ನೇಕಾರ ಅವರ 75ನೇ ವರ್ಷದ ಜನ್ಮ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮಕ್ಕಳು ತಂದೆ ತಾಯಿಯರನ್ನು ಮರೆತ ಕಾರಣ ದೇಶದಲ್ಲಿ ವೃದ್ಧಾಶ್ರಮಗಳು ಜಾಸ್ತಿ ಆಗುತ್ತಲಿವೆ. ಆದರೆ, ಇದು ಭಾರತೀಯ ಸಂಸ್ಕೃತಿ ಅಲ್ಲ. ಶೈಕ್ಷಣಿಕವಾಗಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದು, ಮಕ್ಕಳಲ್ಲಿ ಚೈತನ್ಯ ಕಡಿಮೆ ಆಗುತ್ತಿದೆ. ಮಕ್ಕಳು ಸಂಸ್ಕಾರ ವಂಚಿತರಾಗಿ ವಿದೇಶ ಸಂಸ್ಕೃತಿಯನ್ನು ಅನುಕರಣೆ ಮಾಡುವಂತಾಗಿದೆ’ ಎಂದರು.
‘ಮೂರು ದಶಕಗಳ ಕಾಲ ಸಾವಿತ್ರಮ್ಮ ಅವರು ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ವಿದ್ಯಾ ದಾನ ಮಾಡಿ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದಾರೆ’ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಲಲಿತಮ್ಮ ಕೇರಿಮನಿ ಮಾತನಾಡಿ, ‘ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಸಂವಿಧಾನದ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕೆ.ಎ. ಬಳಿಗೇರ, ಜಿ.ಎಸ್. ಗುಡಗೇರಿ ಮಾತನಾಡಿದರು. ತಾಲ್ಲೂಕು ಶಿವಸಮಶಾಲಿ ಸಮಾಜದ ಅಧ್ಯಕ್ಷ ಶಾಂತಪ್ಪ ಗುಡಗೇರಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎಚ್.ಎನ್. ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಮುಂಡರಗಿ ಬಿಇಒ ಎಚ್.ಎಂ. ಪಡ್ನೀಸ್, ಬಸಣ್ಣ ಬೆಟಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಹವಳದ, ಶಂಕ್ರಣ್ಣ ಬಾಳಿಕಾಯಿ, ರವೀಂದ್ರ ನೇಕಾರ, ಉಮೇಶ ನೇಕಾರ, ಗಿರೀಶ ನೇಕಾರ, ಚಂದ್ರು ನೇಕಾರ ಇದ್ದರು.
ಈ ವೇಳೆ ಸಾವಿತ್ರಮ್ಮ ನೇಕಾರ 75 ಶಾಲೆಗಳಿಗೆ ಸಸಿ, ರಾಮಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್, ಗೆಳೆಯರ ಬಳಗದ 75 ಸದಸ್ಯರಿಗೆ ವಸ್ತ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.