ನರಗುಂದ: ‘ಜನರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನನ್ನ ಸುದೀರ್ಘ ರಾಜಕೀಯ ಅನುಭವದಲ್ಲಿ ಅಭಿವೃದ್ಧಿ ಮಾಡದ ಕಾಂಗ್ರೆಸ್ ನಂತಹ ಸರ್ಕಾರ ನಾನು ಕಂಡಿಲ್ಲ. ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಶೂನ್ಯ’ ಎಂದು ಶಾಸಕ ಸಿ.ಸಿ. ಪಾಟೀಲ ಕಿಡಿಕಾರಿದರು.
ತಾಲ್ಲೂಕಿನ ಚಿಕ್ಕನರಗುಂದದಲ್ಲಿ ನಿರ್ಮಾಣಗೊಂಡ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಸೇರಿದಂತೆ ₹2.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.
‘ಅಭಿವೃದ್ಧಿ ಕುರಿತಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಈ ದಿನ ಉದ್ಘಾಟನೆಗೊಂಡ ಕಟ್ಟಡಗಳೆಲ್ಲ ಬಿಜೆಪಿ ಸರ್ಕಾರ ಅವಧಿಯಲ್ಲಿ ಅನುದಾನ ನೀಡಿದ್ದರಿಂದ ಕಾಮಗಾರಿಗಳು ಉದ್ಘಾಟನೆಗೊಂಡಿವೆ. ಕೆಪಿಎಸ್ ನೂತನ ಕಟ್ಟಡದ ಕಾರಿಡಾರ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ಗ್ರಿಲ್ ಹಾಕಿಸಿಕೊಡುತ್ತೇನೆ’ ಎಂದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ. ಮಾಜಿ ಅಧ್ಯಕ್ಷ ಶರಣಪ್ಪ ಹಳೇಮನಿ ಮಾತನಾಡಿ, ‘ನೂತನ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಇನ್ನು ಹೆಚ್ಚಿನ ಕೊಠಡಿಗಳ ನಿರ್ಮಾಣವಾಗಬೇಕು. ಶಾಲೆ ಕಟ್ಟಡ ಕಾರಿಡಾರ ಎತ್ತರದಲ್ಲಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಗ್ರಿಲ್ ಹಾಕಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.
ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡ ₹1.51 ಕೋಟಿ, ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ₹49.98 ಲಕ್ಷ, ಅಂಗನವಾಡಿ ಕೇಂದ್ರ-106ರ ಕಟ್ಟಡ ಕಾಮಗಾರಿಗೆ ₹10 ಲಕ್ಷ, ನರಗುಂದ-ಚಿಕ್ಕನರಗುಂದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ₹50 ಲಕ್ಷ, ಮಹಿಳಾ ವರ್ಕ್ ಶಾಪ್ ಹಾಗೂ ಗೋದಾಮು ನಿರ್ಮಾಣಕ್ಕೆ ₹25 ಲಕ್ಷ, ಹಾಗೂ ಗಜಾನನ ಸಮುದಾಯ ಭವನಕ್ಕೆ ₹5 ಲಕ್ಷ ಸೇರಿದಂತೆ ಒಟ್ಟು₹ 2.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಚಂದ್ರು ದಂಡಿನ, ಮುತ್ತು ರಾಯರಡ್ಡಿ, ಶಿವಪ್ಪ ಗಣೇಶ, ರುದ್ರಗೌಡ ರಾಚನಗೌಡ್ರ, ದೇಸಾಯಿಗೌಡ ಪಾಟೀಲ, ಶಿವಾನಂದ ಸಾತನ್ನವರ, ಜಡಿಯಪ್ಪಗೌಡ ಚನ್ನವೀರಗೌಡ್ರ, ಹನುಮಂತ ಬಾಚಿ, ಬಸವರಾಜ ತಳವಾರ, ಗುರಪ್ಪ ಆದೆಪ್ಪನವರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೆಪಿಎಸ್ ಶಾಲೆ ಉದ್ಘಾಟನೆ ಸಂದರ್ಭದಲ್ಲಿ ಬಿಇಒ ಗುರುನಾಥ ಹೂಗಾರ, ತಾಲ್ಲೂಕು ಪಂಚಾಯಿತಿ ಇಒ ಎಸ್.ಕೆ ಇನಾಮದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.