ADVERTISEMENT

ಅಂಗನವಾಡಿಗೆ ಕಳಪೆ ಧಾನ್ಯ ಪೂರೈಕೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 10:15 IST
Last Updated 14 ಆಗಸ್ಟ್ 2012, 10:15 IST
ಅಂಗನವಾಡಿಗೆ ಕಳಪೆ ಧಾನ್ಯ ಪೂರೈಕೆ: ಆಕ್ರೋಶ
ಅಂಗನವಾಡಿಗೆ ಕಳಪೆ ಧಾನ್ಯ ಪೂರೈಕೆ: ಆಕ್ರೋಶ   

ಅರಸೀಕೆರೆ: ಆಹಾರ ಧಾನ್ಯದಲ್ಲಿ ಹುಳು, ಕಸ. ಬಳಕೆಗೆ ಯೋಗ್ಯವಲ್ಲದ ಬೆಲ್ಲ. ಹೆಸರು, ಅಕ್ಕಿಯಲ್ಲಿ ಹರಿದಾಡುತ್ತಿರುವ ಹುಳುಗಳು. ಕಾಲು ಕೆ.ಜಿ.ಯ ತೈಲ 200 ಗ್ರಾಂ ಮಾತ್ರ ತೂಗುತ್ತದೆ.
-ಇದು ಪಟ್ಟಣದ ಅಂಗನವಾಡಿ ಕೇಂದ್ರಕ್ಕೆ ಸರಬ ರಾಜು ಮಾಡುವ ಆಹಾರ ಧಾನ್ಯದ ವಾಸ್ತವ.

ಪಟ್ಟಣದ ಸರ್ಕಾರಿ ಪೆಟ್ಟಾ ಪ್ರಾಥಮಿಕ ಶಾಲೆ ಆವರಣದ ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾದ ಪಡಿತರ ಪದಾರ್ಥಗಳಲ್ಲಿ ಹುಳು ಇರುವುದನ್ನು ಪತ್ತೆ ಹಚ್ಚಿದ ಜನತೆ ಸ್ಥಳಕ್ಕೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕರೆಸಿ ತರಾಟೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆಯಿತು.

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಡುಗೆ ತಯಾರಿಸಲು ಸರಬರಾಜು ಆಗಿದ್ದ ಪೌಷ್ಟಿಕ ಆಹಾರವಾದ ಧಾನ್ಯ, ಗೋಧಿ ಹೆಂಟೆಕಟ್ಟಿ ಹಾಳಾಗಿವೆ. ಅಕ್ಕಿಯಲ್ಲಿ ಬಿಳಿ ಹುಳು ಸರಿದಾಡುತ್ತಿವೆ. ಬೆಲ್ಲ ಬಳಕೆಗೆ ಯೋಗ್ಯವಾಗಿಲ್ಲ. ಹೆಸರು ಕಾಳುಗಳಿಂದ ವಾಸನೆ ಬರುತ್ತಿದೆ. ಎಣ್ಣೆ ಪ್ಯಾಕೆಟ್ ತೂಕ ಹಾಕಿದರೆ ಕಡಿಮೆ ತೂಗುತ್ತದೆ.

ಅಂಗನವಾಡಿಗೆ ಕಳಪೆ ಪಡಿತರ ಧಾನ್ಯಗಳನ್ನು ವಾಹನದಿಂದ ಇಳಿಸುತ್ತಿದ್ದ ವೇಳೆ ರಸ್ತೆಯಲ್ಲಿ ಹೋಗು ತ್ತಿದ್ದ ದಲಿತ ಸಂಘರ್ಷ ಸಮಿತಿ ಮುಖಂಡ ರಂಗನಾಥ್ ಅನುಮಾನ ಬಂದು ಪಡಿತರವನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿತು. ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಆ ವೇಳೆಗೆ ಕೆಲ ಪೋಷಕರು ಆಗಮಿಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯಾಧಿಕಾರಿ ಶಂಕರಪ್ಪ, ಸರ್ಕಾರಿ ಜೆ.ಸಿ. ಆಸ್ಪತ್ರೆಯ ಹಿರಿಯ ಆರೋಗ್ಯಾಧಿಕಾರಿ ಡಾ. ಶೈಲಜಾ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದರು. `ಇಂತಹ ಕಳಪೆ ಆಹಾರ ಪದಾರ್ಥ ಸೇವಿಸಿದರೆ ಎಳೆಯ ಮಕ್ಕಳ, ಗರ್ಭಿಣಿ ಹಾಗೂ ಬಾಣಂತಿಯರ ಗತಿ ಏನು? ಎಂದು ಪ್ರಶ್ನಿಸಿದರು. ಇಂತಹ ಆಹಾರ ಪದಾರ್ಥ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.