ಹಾಸನ: ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಕರೀಗೌಡನಕೊಪ್ಪಲಿನಲ್ಲಿ ನಡೆದಿದೆ.
ಕರೀಗೌಡನಕೊಪ್ಪಲು ಗ್ರಾಮದಲ್ಲಿ ಯೋಗೇಶ, ರಾಜೇಗೌಡ ಹಾಗೂ ರಾಮಕೃಷ್ಣ ಎಂಬುವವರು ಕಳೆದ ಮೂರು ವರ್ಷಗಳಿಂದ ಅನಧಿಕೃತವಾಗಿ ಮದ್ಯ ಮಾಡಾಟ ಮಾಡುತ್ತಿದ್ದಾರೆ. ಈ ಬಗ್ಗೆ ಆಗಸ್ಟ್ 16ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಇವರನ್ನು ನಿಯಂತ್ರಿಸಲು ವಿನಂತಿಸಲಾಗಿತ್ತು. ಆದರೆ ಈ ವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಾತ್ರವಲ್ಲ ಅಬಕಾರಿ ಇನ್‌ಸ್ಪೆಕ್ಟರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಅವರು ಅಕ್ರಮ ಮದ್ಯ ಮಾರಾಟಗಾರರನ್ನು ನಿಯಂತ್ರಿಸುವ ಬದಲು ಅವರಿಂದಲೇ ಹಣ ಪಡೆಯುತ್ತಿದ್ದಾರೆ~ ಎಂದು ಪ್ರತಿಭಟನಾಕಾರರು ಆರೋಪಿಸಿದರು.
`ಗ್ರಾಮಸ್ಥರಿಂದ ಈ ಅಕ್ರಮವನ್ನು ತಡೆಯಲು ಆಗುತ್ತಿಲ್ಲ. ಬದಲಿಗೆ ಅವರೇ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಂಜೆ ವೇಳೆ ಮದ್ಯಪಾನ ಮಾಡಿ ಊರವರನ್ನು ಏಕವಚನದಲ್ಲಿ ಬಯ್ದಾಡುತ್ತಾರೆ. ತಡರಾತ್ರಿವರೆಗೂ ಗದ್ದಲ, ಜಗಳ ನಡೆಯುತ್ತದೆ ಎಂದು ಮಹಿಳೆಯರು ದೂರಿದರು.
ಶುಕ್ರವಾರ ಪ್ರತಿಭಟನೆಗೆ ಇಳಿದ ಗ್ರಾಮಸ್ಥರು ಮದ್ಯದ ಬಾಟಲುಗ ಳನ್ನು ಮಾರ್ಗದ ಮಧ್ಯದಲ್ಲಿಟ್ಟು ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಅಬಕಾರಿ ಇಲಾಖೆಯ ಅಧಿಕಾರಿಗಳು ಬಂದು ನಮ್ಮ ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದರು.
ಶೀಘ್ರದಲ್ಲೇ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸದಿದ್ದರೆ ಈ ವೃತ್ತಿಗೆ ಸರ್ಕಾರದ ಅನುಮತಿ ಇದೆ ಎಂದು ಭಾವಿಸಿ ಮನೆಮನೆಗಳಲ್ಲೂ ಅಂಗಡಿ ತೆರೆಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.