ADVERTISEMENT

ಅಣ್ಣಾ ಹಜಾರೆ ಪರ-ವಿರೋಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 6:45 IST
Last Updated 24 ಆಗಸ್ಟ್ 2011, 6:45 IST
ಅಣ್ಣಾ ಹಜಾರೆ ಪರ-ವಿರೋಧ ಪ್ರತಿಭಟನೆ
ಅಣ್ಣಾ ಹಜಾರೆ ಪರ-ವಿರೋಧ ಪ್ರತಿಭಟನೆ   

ಹಾಸನ: ಒಂದೇ ವೇದಿಕೆಯಲ್ಲಿ ಅಣ್ಣಾ ಹಜಾರೆ ಪರ ಮತ್ತು ವಿರೋಧಿ ಬಣಗಳು ಹೋರಾಟಕ್ಕಿಳಿದು ಗೊಂದಲ ಉಂಟು ಮಾಡಿದ ಘಟನೆ ಹಾಸನದಲ್ಲಿ ಮಂಗಳವಾರ ನಡೆದಿದೆ.ಜನಲೋಕಪಾಲ ಮಸೂದೆಯನ್ನು ವಿರೋಧಿಸಿ `ಭ್ರಷ್ಟಾಚಾರ ವಿರೋಧಿ ದಲಿತ, ರೈತ, ಕಾರ್ಮಿಕ ವೇದಿಕೆ~ ಜಿಲ್ಲಾಧಿಕಾರಿ ಕಚೇರಿ ಆವರಣದ ಹೊರಗೆ, ಅಂಬೇಡ್ಕರ್  ಪ್ರತಿಮೆಯ ಮುಂದೆ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
 
ಜನ ಲೋಕಪಾಲ ಮಸೂದೆ ವಿರೋಧಿ ಹೋರಾಟವಾಗಿದ್ದರೂ ಇವರು ಹಾಕಿದ್ದ ಬ್ಯಾನರ್ ಹಾಗೂ ವಿತರಿಸಿದ ಕರಪತ್ರದಲ್ಲಿ `ಪರಿಷ್ಕೃತ ಲೋಕಪಾಲ ಮಸೂದೆಗೆ~ ಒತ್ತಾಯಿಸಿ ಧರಣಿ ಸತ್ಯಾಗ್ರಹ ಎಂದು ಬರೆಯಲಾಗಿತ್ತು.

ಸತ್ಯಾಗ್ರಹದ ಸ್ಥಳಕ್ಕೆ ಬೆಳಿಗ್ಗೆ 10.30ರ ಸುಮಾರಿಗೆ ಬಂದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪತ್ರಕರ್ತರೊಡನೆ ಮಾತನಾಡುತ್ತ, `ಅಣ್ಣಾ ಹಜಾರೆ ಹೋರಾಟ ಸರಿಯಾಗಿದೆ. ಭ್ರಷ್ಟಾಚಾರ ತಡೆಗೆ ಬಲಿಷ್ಠವಾದ ಲೋಕಪಾಲ್ ಮಸೂದೆ ಬೇಕು. ಅವರ ಹೋರಾಟವನ್ನು ರೈತ ಸಂಘ ಬೆಂಬಲಿಸುತ್ತದೆ~ ಎಂದರು.

ಆದರೆ ವೇದಿಕೆಯ ವಿತರಿಸಿದ ಕರಪತ್ರದಲ್ಲಿ ಒಂದು ಕಡೆ, `ಅಣ್ಣಾ ಹಜಾರೆ ಮತ್ತು ತಂಡದವರ `ಬ್ಲ್ಯಾಕ್‌ಮೇಲ್~ಗೆ ಸರ್ಕಾರ ಮಣಿಯಬಾರದು ಎಂದಿದೆ. ಆ ಬಗ್ಗೆ ವಿವರಣೆ ಕೇಳಿದಾಗ, `ಅದು ಬ್ಲ್ಯಾಕ್‌ಮೇಲ್ ಅಲ್ಲ~ ಎಂದರು. ಕೊನೆಗೆ ತಮ್ಮಳಗೇ ಭಿನ್ನಾಭಿಪ್ರಾಯ ಇದೆ ಎಂಬುದನ್ನು ಒಪ್ಪಿಕೊಂಡರು.

ಇದಾದ ಬಳಿಕ ಮಾತನಾಡಿದ ಸಿಪಿಐ ಮುಖಂಡ ಎಂ.ಸಿ. ಡೋಂಗ್ರೆ, `ಅಣ್ಣಾ ಹೋರಾಟದ ಹಿಂದೆ ಬೇರೆಯವರ ಕೈವಾಡವಿದೆ, ಅಣ್ಣಾ ಹಜಾರೆ ಅವರನ್ನು ಬಳಸಿಕೊಂಡು ಈ ಕೈಗಳು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿವೆ. ಅವರ ತಂಡದಲ್ಲಿರುವ ಯಾರೂ ಹಿಂದೆ ಅಣ್ಣಾ ಜತೆ ಇರಲಿಲ್ಲ~ ಎಂದರು.

ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಬಂದ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅಣ್ಣಾ ಹಜಾರೆ, ಅವರ ತಂಡ, ಜನಲೋಕಪಾಲ್ ಮಸೂದೆ ಎಲ್ಲದರ ವಿರುದ್ಧವೂ ಕಿಡಿ ಕಾರಿದರು. ಹೋರಾಟದ ಹಿಂದೆ `ಮನು~ ಕಾನೂನನ್ನು ಜಾರಿಗೊಳಿಸುವ ಬ್ರಾಹ್ಮಣರ ಹುನ್ನಾರ ಇದೆ ಎಂದೂ ಆರೋಪಿಸಿದರು. 

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕೋಡಿಹಳ್ಳಿ ಚಂದ್ರಶೇಖರ್, `ಕೆಲವು ಲೋಪದೋಷಗಳಿವೆ, ಅಣ್ಣಾ ಹಿಂದೆ ಬೇರೆ ಕೈಗಳಿದ್ದರೂ ಇರಬಹುದು, ಆದರೆ ಜನಲೋಕಪಾಲನ್ನು ಎಲ್ಲರೂ ಬೆಂಬಲಿಸಬೇಕು~ ಎಂದರು.
ಇದರಿಂದ ಸಿಟ್ಟಿಗೆದ್ದ ಶಿವಪ್ರಸಾದ್, `ನಾವು ಅಣ್ಣಾ ಹಜಾರೆ ಹೋರಾಟವನ್ನು ವಿರೋಧಿಸುತ್ತೇವೆ.

ನೀವು ಬೆಂಬಲಿಸುವುದಿದ್ದರೆ ಬೇರೆ ಕಡೆ ಹೋರಾಟ ಮಾಡಿ, ದಯವಿಟ್ಟು ಇಲ್ಲಿಂದ ಎದ್ದು ಹೋಗಿ~ ಎಂದರು. ಸ್ವಲ್ಪ ಹೊತ್ತಿನಲ್ಲಿ ಕೋಡಿಹಳ್ಳಿ ಅಲ್ಲಿಂದ ಎದ್ದು ಹೋಗಿದ್ದರು.

ಉಳಿದಂತೆ ಅಣ್ಣಾ ಹಜಾರೆ ಹೋರಾಟವನ್ನು ಬೆಂಬಲಿಸಿ ಮಂಗಳವಾರವೂ ಹಾಸನದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಜೆಡಿಎಸ್ ಮುಖಂಡರೂ ಸಹ ಮೊದಲ ಬಾರಿ ಅಣ್ಣಾ ಹಜಾರೆ ಬೆಂಬಲಿಸಿ ಮೆರವಣಿಗೆ ನಡೆಸಿದರು.

ಜೆಡಿಎಸ್ ಮುಖಂಡರು ಬೆಳಿಗ್ಗೆ 11.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು ಪ್ರತಿಭಟನೆ ಆರಂಭಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ, ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಶಾಸಕ ಎಚ್.ಕೆ. ಕುಮಾರಸ್ವಾಮಿ ಮತ್ತಿತರರು ಎಚ್.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್  ಮುಂತಾದವರು ಪಾಲ್ಗೊಂಡಿದ್ದರು.

ಧರ್ಮೇಶ್ ನೇತೃತ್ವದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸದಸ್ಯರೂ ಸಹ ಇವರ ಜತೆ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ, ವೀರಶೈವ ಸಂಘ, ಭಾರತೀಯ ಕಿಸಾನ್ ಸಂಘ, ಕಟ್ಟಡ ಕಾರ್ಮಿಕರ ಸಂಘ ಮುಂತಾದ ಹತ್ತು ಹಲವು ಸಂಘಟನೆಗಳು ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.