ADVERTISEMENT

ಅಧ್ಯಕ್ಷರ ವಿರುದ್ಧ ಸದಸ್ಯರ ಧಿಕ್ಕಾರ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಅನುದಾನ ಹಂಚಿಕೆಯಲ್ಲಿ ತಾರತಮ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 9:17 IST
Last Updated 14 ಡಿಸೆಂಬರ್ 2013, 9:17 IST

ಹಾಸನ: 13ನೇ ಹಣಕಾಸು ನಿಧಿಯನ್ನು ಎಲ್ಲ ಕ್ಷೇತ್ರಗಳಿಗೆ ಸಮನಾಗಿ ಹಂಚಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾರಿ ಕೋಲಾಹಲ ಏರ್ಪಟ್ಟು, ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆಯಿತು.

ಹಲವು ವರ್ಷಗಳ ನಂತರ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಇಂಥ ಘಟನೆ ನದಿದೆ.
ಸಭೆ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲೇ ಮಾತಿನ ಚಕಮಕಿ ಆರಂಭವಾಗಿತ್ತು. ‘ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷರು ತಾರತಮ್ಯ ಮಾಡಿದ್ದಾರೆ. ಕೆಲವು ಕ್ಷೇತ್ರಗಳಿಗೆ ಮುಂದುವರಿದ ಕಾಮಗಾರಿ­ಗಾಗಿ 60–70 ಲಕ್ಷ ನೀಡಿದ್ದರೆ ಇನ್ನುಳಿದ ಕ್ಷೇತ್ರಗಳಿಗೆ ಬೇಕಾದಷ್ಟು ಹಣ ನೀಡಿಲ್ಲ’ ಎಂದು ಬಿಜೆಪಿ ಸದಸ್ಯರಾದ ಅಮಿತ್‌ ಶೆಟ್ಟಿ, ಲಕ್ಷ್ಮಣ, ಜ್ಯೋತಿ ಗುರುದೇವ್‌ ಮುಂತಾದವರು ಆರೋಪಿಸಿದರು.

ಇದಕ್ಕೆ ಜೆಡಿಎಸ್‌ ಸದಸ್ಯರೇ ಆಗಿರುವ ಕಿಶೋರ್‌ ಸಹ ಸಾಥ್‌ ನೀಡಿ ಅಧ್ಯಕ್ಷರ ಜತೆ ವಾಗ್ವಾದಕ್ಕೆ ಇಳಿದರು. ಒಬ್ಬರ ಮಾತು ಒಬ್ಬರಿಗೆ ತಿಳಿಯಲಾಗದ ಸ್ಥಿತಿ ಬಂದಾಗ ಎದ್ದುನಿಂತ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ಆಡಳಿತ ಪಕ್ಷದ ಸದಸ್ಯರಿರುವ ಮತ್ತು ಶಾಸಕರ ಕ್ಷೇತ್ರಗಳಿಗೆ ಸ್ವಲ್ಪ ಹಚ್ಚು ಅನುದಾನ ಕೊಡುವುದು ಹಿಂದಿನಿಂದಲೂ ನೆದುಕೊಂಡು ಬಂದಿದೆ. ಇಲ್ಲೂ ಸ್ವಲ್ಪ ಏರುಪೇರಾಗಿರಬಹುದು. ಅದೂ ಅಲ್ಲದೆ ಅಧ್ಯಕ್ಷರ ವಿವೇಚನಾ ಕೋಟದಡಿ ಕೊಡುವ ಅನುದಾನಕ್ಕೆ ಸದಸ್ಯರ ಅನುಮತಿ ಕೇಳಬೇಕಾಗಿಲ್ಲ’ ಎಂದರು.

ಸಣ್ಣಪುಟ್ಟ ಏರುಪೇರಾದರೆ ನಾವು ಪ್ರಶ್ನಿ­ಸುತ್ತಿರಲಿಲ್ಲ, ಇಲ್ಲಿ ಭಾರಿ ಪ್ರಮಾಣದಲ್ಲಿ ತಾರತಮ್ಯ ಮಾಡಲಾಗಿದೆ. ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟರೆ ನಾವೇನು ಮಾಡಬೇಕು? ನಿಮಗೆ ಎರಡು ಕೋಟಿ ರೂಪಾಯಿ ಕ್ಷೇತ್ರಭಿವೃದ್ಧಿ ಹಣ ಇರುತ್ತದೆ, ಅದನ್ನು ಬಳಸಿಕೊಳ್ಳಿ ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುಪಿತರಾದ ಶಿವಲಿಂಗೇಗೌಡ, ‘ಶಾಲಾ ಕೊಠಡಿಗಳಿಗೆ ನಮ್ಮ ಅನುದಾನ ಬಳಸಲು ಆಗುವುದಿಲ್ಲ, ಅದನ್ನು ಜಿ.ಪಂ. ಅನುದಾನದಿಂದಲೇ ಮಾಡಬೇಕಾಗುತ್ತದೆ, ಅದೇನೂ ನನಗೆ ಗೊತ್ತಿಲ್ಲ, ನಾನು ನೀಡಿರುವ ಪಟ್ಟಿಯ ಕೆಲಸಗಳು ಆಗದಿದ್ದರೆ ನಾನು ಸುಮ್ಮನಿರಲ್ಲ’ ಎಂದು ಎಚ್ಚರಿಕೆ ನೀಡಿದರು. ಇದರಿಂದ ಮತ್ತೂ ಸ್ವಲ್ಪಹೊತ್ತು ಗದ್ದಲ ಮುಂದುವರಿಯಿತು.

ಈ ಮಧ್ಯದಲ್ಲೇ ಕಿಶೋರ್‌ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷೆ ವಿರುದ್ಧ ಧಿಕ್ಕಾರ ಕೂಗಿದರು. ಇದು ಜೆಡಿಎಸ್‌ ಸದಸ್ಯರನ್ನು ಕೆರಳಿಸಿತು. ಬಿ.ಡಿ. ಚಂದ್ರೇಗೌಡ, ಹುಚ್ಚೆೇಗೌಡ, ನಂಜುಂಡೇಗೌಡ, ಕುಸುಮಾ ಬಾಲಕೃಷ್ಣ ಮುಂತಾದವರು ಈ ಸದಸ್ಯರ ವಿರುದ್ಧ ತಿರುಗಿಬಿದ್ದರು. ಚರ್ಚೆ ಮಾಡುವುದಿದ್ದರೆ ಮಾತನಾಡಿ, ಧಿಕ್ಕಾರ ಕೂಗುವುದಿದ್ದರೆ ಸಭೆಯಿಂದ ಆಚೆ ನಡೆಯಿರಿ ಎಂದರು.

ಕಿಶೋರ್‌ ಮೇಲೆ ಸಿಟ್ಟಾದ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ‘ನನ್ನ ವಿರುದ್ಧ ಧಿಕ್ಕಾರ ಕೂಗುವುದಿದ್ದರೆ ಮೊದಲು ರಾಜೀನಾಮೆ ಕೊಟ್ಟು ಹೋಗಿ’ ಎಂದರು. ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಾರಲು ಸಾಧ್ಯವಾಗದಿದ್ದಾಗ ಮತ್ತೆ ಎದ್ದುನಿಂದ ಶಾಸಕ ಶಿವಲಿಂಗೇಗೌಡ, ‘ಈ ವಿಚಾರ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡು­ವಂಥದ್ದಲ್ಲ. ಸಭೆ ಮುಗಿದ ಬಳಿಕ ಎಲ್ಲರೂ ಅಧ್ಯಕ್ಷರ ಕೊಠಡಿಗೆ ಬನ್ನಿ, ಅನುದಾನ ಹಂಚಿಕೆಯಲ್ಲಿ ಹೆಚ್ಚುಕಡಿಮೆ ಆಗಿದ್ದಲ್ಲಿ ಅಲ್ಲಿ ಕುಳಿತು ಸರಿಮಾಡೋಣ’ ಎಂದರು. ಅಷ್ಟಕ್ಕೆ ಸದಸ್ಯರು ಸಮಾಧಾನಗೊಂಡರು.

ವೇತನ ಹೆಚ್ಚಿಸಿ
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಸಾವಿರಕ್ಕೂ ಹೆಚ್ಚು ಬಿಸಿಯೂಟ ನೌಕರರ ವೇತನವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಬಿ.ಆರ್‌. ಸತ್ಯನಾರಾಯಣ ಒತ್ತಾಯಿಸಿದರು.

ಈ ಬಗ್ಗೆ ಮಾತನಾಡಿದ ಅವರು, ‘ಬಿಸಿಯೂಟ ನೌಕರರಿಗೆ ಈವರೆಗೆ 1,100 ಮತ್ತು ಸಹಾಯಕರಿಗೆ ಒಂದು ಸಾವಿರ ರೂಪಾಯಿ ವೇತನ ನೀಡಲಾಗುತ್ತಿತ್ತು. ಕ್ಷೀರಭಾಗ್ಯ ಯೋಜನೆಯ ಬಳಿಕ ಅದನ್ನು ಕ್ರಮವಾಗಿ 1200 ಮತ್ತು 1100ಕ್ಕೆ ಹೆಚ್ಚಿಸಿದ್ದಾರೆ. ಸರ್ಕಾರ ಕೃಷಿ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 236 ರೂಪಾಯಿ ವೇತನ ನಿಗದಿ ಮಾಡಿದ್ದು, ಇವರಿಗೆ ಕಡಿಮೆ ಕೊಡುತ್ತಿರುವುದು ಸರಿಯಲ್ಲ. ಈ ಬಗ್ಗೆ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದರು.

ಇತರ ಸದಸ್ಯರೂ ಇದನ್ನು ಬೆಂಬಲಿಸಿ, ನರೇಗಾದಲ್ಲೂ ಕನಿಷ್ಠ 174 ರೂಪಾಯಿ ಕೂಲಿ ನೀಡಲು ಕೋರ್ಟ್‌ ಆದೇಶ ನೀಡಿದೆ, ಸರ್ಕಾರವೂ ಅಷ್ಟು ಹಣ ನೀಡುತ್ತಿದೆ. ಬಿಸಿಯೂಟ ಸಿಬ್ಬಂದಿಗೆ ಕಡಿಮೆ ವೇತನ ನೀಡುವ ಮೂಲಕ ಸರ್ಕಾರ ತಾನು ಮಾಡಿರುವ ಕಾನೂನನ್ನೇ ಮುರಿಯುತ್ತಿದೆ. ಇವರಿಗೂ ಕನಿಷ್ಠ ದಿನಕ್ಕೆ 174 ರೂಪಾಯಿ ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು’ ಎಂದಾಗ ಶಾಸಕರೂ ಅನುಮೋದಿಸಿದರು.

ಬಿಸಿಯೂಟ, ಕ್ಷೀರ ಭಾಗ್ಯಗಳಿಂದಾಗಿ ಮಕ್ಕಳಿಗೆ ಶಿಕ್ಷಣದ ಅವಧಿ ಕಡಿಮೆಯಾಗುತ್ತಿದೆ. ಶಿಕ್ಷಕರನ್ನು ಈ  ಚಟುವಟಿಕೆಗಳಿಂದ ಬೇರ್ಪಡಿಸುವ ಕೆಲಸ ಆಗಬೇಕು ಎಂದು ನಂಜುಂಡೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.