ADVERTISEMENT

ಅಧ್ಯಕ್ಷೆ- ನಳಿನಾಶಿವಕುಮಾರ್, ಉಪಾಧ್ಯಕ್ಷೆ-ಕಮಲಮ್ಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:45 IST
Last Updated 20 ಅಕ್ಟೋಬರ್ 2012, 5:45 IST

ಬೇಲೂರು: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ಆರ್.ನಳಿನಾ ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಕಮಲಮ್ಮ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಇದೇ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಎರಡನೇ ಅವಧಿಗೆ  ಇಂದು ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಆರ್.ನಳಿನಾ ಶಿವಕುಮಾರ್ ಮತ್ತು ಎಸ್.ಟಿ. ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಕಮಲಮ್ಮ ಅವರನ್ನು ಹೊರತು ಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರೀವಿದ್ಯಾ ಇವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

17 ಸದಸ್ಯ ಬಲದ ತಾ.ಪಂ.ಯಲ್ಲಿ ಜೆಡಿಎಸ್-ಬಿಜೆಪಿ ತಲಾ 7 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ 3 ಸ್ಥಾನವನ್ನು ಹೊಂದಿದ್ದು, 2ನೇ ಅವಧಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ತಲಾ 10 ತಿಂಗಳ ಅಧಿಕಾರವನ್ನು ಹಂಚಿಕೆ ಮಾಡಿಕೊಂಡಿವೆ.

ಕಮಲಮ್ಮ ಹೊರತು ಪಡಿಸಿ ಬೇರೆ ಎಸ್.ಟಿ.ಮಹಿಳೆ ವರ್ಗಕ್ಕೆ ಸೇರಿದವರು ಈ ಎರಡೂ ಪಕ್ಷಗಳಲ್ಲಿ ಯಾರೂ ಇಲ್ಲದ ಕಾರಣ ಕಮಲಮ್ಮ ಅವರಿಗೆ ಉಪಾಧ್ಯಕ್ಷ ಹುದ್ದೆ ಒಲಿದು ಬಂತು. ಪಕ್ಷದ ಹೈಕಮಾಂಡ್ ಮಾತನ್ನು ಗಣನೆಗೆ ತೆಗೆದು ಕೊಳ್ಳದ ಜೆಡಿಎಸ್ ಸದಸ್ಯರು ತಾವೇ ನೇರವಾಗಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಆಯ್ಕೆಯ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿದರು.
 
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಜಿ.ಪಂ. ಸದಸ್ಯರಾದ ಅಮಿತ್‌ಕುಮಾರ್‌ಶೆಟ್ಟಿ, ಎಂ.ವಿ.ಹೇಮಾವತಿ, ಇ.ಎಚ್.ಲಕ್ಷ್ಮಣ್, ಮುಖಂಡರಾದ ಜಿ.ಕೆ.ಕುಮಾರ್, ಸಂಜು, ವಿಕ್ರಂ, ಕೊರಟಿಗೆರೆ ಪ್ರಕಾಶ್, ಬಿ.ಶಿವರುದ್ರಪ್ಪ, ಕಾಂಗ್ರೆಸ್ ಮುಖಂಡರಾದ ಪುನೀತ್‌ಗೌಡ, ಎಂ.ಆರ್.ವೆಂಕಟೇಶ್, ತುಳಸಿ, ನಿಶಾಂತ, ಬಿ.ಎ.ಜಮಾಲುದ್ದೀನ್, ಜುಬೇರ  ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT