ADVERTISEMENT

ಅಪಾಯ ಆಹ್ವಾನಿಸುವ ವಿದ್ಯುತ್ ತಂತಿ!

ಪ್ರಜಾವಾಣಿ ವಿಶೇಷ
Published 21 ಮಾರ್ಚ್ 2014, 9:12 IST
Last Updated 21 ಮಾರ್ಚ್ 2014, 9:12 IST

ಹಿರೀಸಾವೆ: ವಿದ್ಯುತ್‌ ತಂತಿಗಳು ನೆಲದಿಂದ ಕಡಿಮೆ ಎತ್ತರದಲ್ಲಿ ನೇತಾಡುತ್ತಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ತೆಂಗಿನ ತೋಟದಲ್ಲಿ ಕೃಷಿ  ಕೆಲಸಗಳನ್ನು ಮಾಡುತ್ತಿದ್ದಾರೆ ಹೋಬಳಿಯ ಸೋರೆಕಾಯಿಪುರದ ರೈತರು.

ತೆಂಗಿನಮರಗಳ ನಡುವೆ ಹಲವು ವರ್ಷಗಳ ಹಿಂದೆ ವಿದ್ಯುತ್ ತಂತಿ ಎಳೆಯಲಾಗಿದೆ. ಕಂಬಗಳನ್ನು ದೂರ, ದೂರಕ್ಕೆ ಹಾಕಲಾಗಿದೆ. ತಂತಿಗಳು ನೆಲಮಟ್ಟಕ್ಕೆ ನೇತುಬಿದ್ದಿವೆ. ಕಂಬಗಳನ್ನು ನಿಯಮಾನುಸಾರ ಹಾಕಿಲ್ಲ. ರೈತರು ನಡೆದು ಹೋಗುತ್ತಿದ್ದರೆ ತಲೆಗೆ ತಗುಲುತ್ತಿವೆ. ಕೆಲವು ವಿದ್ಯುತ್ ಕಂಬಗಳು ಸಿಥಿಲಗೊಂಡಿವೆ. ರೈತರು ಸ್ವಲ್ಪ ಮೈ ಮರೆತರು ಅಪಾಯ ಗ್ಯಾರಂಟಿ.

ಬುಧವಾರ ರಾತ್ರಿ ಲಕ್ಷ್ಮಣಮೂರ್ತಿ ಎಂಬುವವರ ತೋಟದಲ್ಲಿ ವಿದ್ಯುತ್ ತಂತಿಗಳು ಒಂದಕ್ಕೆ ಒಂದು ತಗುಲಿ, ಶಾರ್ಟ್ ಸರ್ಕಿಟ್ ಉಂಟಾಗಿ ರಾಗಿ ಹುಲ್ಲಿನ ಬಣವೆ ಭಸ್ಮವಾಗಿದೆ. ಸುಮಾರು 25 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಕುಟುಂಬದವರು ಅಳಲು ತೋಡಿಕೊಳ್ಳುತ್ತಾರೆ.

‘ಪ್ರತಿನಿತ್ಯ ಈ ರೀತಿಯ ಅವಘಡಗಳು ಸಂಭವಿಸು­ತ್ತಿವೆ. 6 ರಿಂದ 8 ಅಡಿ ಎತ್ತರದಲ್ಲಿ ವಿದ್ಯುತ್ ತಂತಿ ಹಾಕಲಾಗಿದೆ. ಭೂಮಿ ಉಳುಮೆ ಮಾಡಲು ತೊಂದರೆಯಾಗುತ್ತಿದೆ. ಜಾನುವಾರು ಮೇಯಿಸಲು ಭಯವಾಗುತ್ತದೆ. ನಮ್ಮ ಕಷ್ಟವನ್ನು ಯಾರೂ ಕೇಳುತ್ತಿಲ್ಲ’ ಎಂದು ಗ್ರಾಮದ ವೆಂಕಟೇಶ್ ದೂರಿದರು.

‘ವಿದ್ಯುತ್ ಮಾರ್ಗ ಸರಿಪಡಿಸಿ, ಎತ್ತರದಲ್ಲಿ ತಂತಿ ಹಾಕುವಂತೆ ಎರಡು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ವಿದ್ಯುತ್ ಮಾರ್ಗದ ಅಕ್ಕ–ಪಕ್ಕ ಇರುವ ತೆಂಗಿನ ಗರಿಗಳನ್ನು ಕಡಿಯುವಂತೆ ಸೆಸ್ಕ್ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನ­ವಾಗಿಲ್ಲ. ಕೆಲವು ಬಾರಿ ನಾವುಗಳೇ ತೆಂಗಿನ ಗರಿಗಳನ್ನು ಕತ್ತರಿಸಿದ್ದೇವೆ’ ಎಂದು ಗ್ರಾಮದ ಲಕ್ಷ್ಮಣ ಹೇಳಿದರು.

‘ಈ ಹಿಂದೆ ಇಲಾಖೆಯ ಅನುಮತಿ ಇಲ್ಲದೆ ಮಾರ್ಗವನ್ನು ರೈತರು ಎಳೆಸಿಕೊಂಡಿದ್ದಾರೆ. ತೋಟಗಳ ನಡುವೆ ಇರುವ ವಿದ್ಯುತ್ ಮಾರ್ಗಗಳನ್ನು ಪರಿಶೀಲನೆ ನಡೆಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದು, ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗುವುದು’ ಎಂದು ಹಿರೀಸಾವೆ ಸೆಸ್ಕ್ ಶಾಖಾಧಿಕಾರಿ ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಗ್ರಾಮದ ತೆಂಗಿನ ಮರಗಳ ನಡುವೆ ಹಾದು ಹೋಗಿರುವ ವಿದ್ಯುತ್ ಮಾರ್ಗವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುತ್ತೆ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.