ADVERTISEMENT

ಅಪೌಷ್ಟಿಕ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:25 IST
Last Updated 20 ಆಗಸ್ಟ್ 2012, 8:25 IST

ಹಾಸನ: ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿ ರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು 20 ಹಾಸಿಗೆಗಳ ಎನ್‌ಆರ್‌ಸಿ ವಾರ್ಡ್ ಪ್ರಾರಂಭಿಸಲಾ ಗುವುದು ಎಂದು ವದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.

ಭಾನುವಾರ ಹಾಸನ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ನಡೆದ ಗೌರ್ನಿಂಗ್ ಕಮಿಟಿ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ಇದಕ್ಕೆ ಬೇಕಾಗುವ ಎಲ್ಲ ಸೌಲಭ್ಯವನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ.ಬೆಂಗಳೂರು,ರಾಯಚೂರು , ಗುಲ್ಬರ್ಗ ಹಾಗೂ ಮೈಸೂರಿನಲ್ಲಿ ಈ ರೀತಿಯ ವಾರ್ಡ್ ತೆರೆಯಲಾಗಿದೆ ಎಂದರು.

ವಾರ್ಡ್‌ನಲ್ಲಿ ಪೌಷ್ಟಿಕ ಆಹಾರ ತಯಾರಿಕೆಗೆ ಅಡುಗೆಕೊಣೆ, ಮಕ್ಕಳಿಗೆ ಆಟಿಕೆ ಪೂರೈಸಲಾಗುವುದು. ಪೋಷಕರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ನುರಿತ ತಜ್ಞರನ್ನು ನೇಮಿಸಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕರ್ತವ್ಯ ನಿರ್ವಹಣೆ ಪಾರದರ್ಶಕತೆ ಕಾಯ್ದುಕೊಳ್ಳಲು ಆಸ್ಪತ್ರೆಯಲ್ಲಿ ವೈದ್ಯರ ಹಾಜರಾತಿ ಪರೀಕ್ಷಿಸಲು `ಈ ಹಾಜರಾತಿ~ ಬಯೊಮೇಟ್ರಿಕ್ ವ್ಯವಸ್ಥೆ ಜಾರಿಗೆ ಮೂಲಕ ಹಾಜರಾತಿ ಹಾಗೂ ಜಾಬ್ ಚಾರ್ಟ್ ಆಧಾರದಲ್ಲಿ ಸಂಬಳ ನೀಡಲು ನಿರ್ಧರಿಸಲಾಗಿದೆ ಎಂದರು.

ಭಾರತೀಯ ವೈದ್ಯಕೀಯ ಮಂಡಳಿ ರಾಜ್ಯದ ಆರು ಸರ್ಕಾರಿ ವೈದ್ಯಕೀಯ ವಿದ್ಯಾಲಯಗಳಿಗೆ ಶಾಶ್ವತ ಮಾನ್ಯತೆ ನೀಡಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಆರು ವೈದ್ಯಕೀಯ ಕಾಲೇಜಿನ ಮಾನ್ಯತೆ ಯನ್ನು ಪ್ರತಿ ವರ್ಷ ನವೀಕರಣ ಮಾಡಿಸಲಾಗುತ್ತಿತ್ತು. ಎಂ.ಸಿ.ಐ ನಿಬಂಧನೆಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಶಾಶ್ವತ ಮಾನ್ಯತೆ ದೊರೆತಿದೆ ಎಂದರು.

ರಾಜ್ಯದಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ 2013-14 ಸಾಲಿನಿಂದ ರಾಜ್ಯದ ಆರು ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಹಾಸನ ವೈದ್ಯಕೀಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆ ಕಾಮಗಾರಿಗೆ ಬೇಕಾಗುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಿದ್ದು, ಅಕ್ಟೋಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯ ಸರ್ಕಾರಿ ನರ್ಸಿಂಗ್ ಕಾಲೇಜ್‌ಅನ್ನು ಹಾಸನ ವೈದ್ಯಕೀಯ ಮಂಡಳಿ ಅಧಿನದಲ್ಲಿ ನಡೆಸಲು ಆದೇಶ ನೀಡಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬಿಸಿನೀರು ಒದಗಿಸಲು ಸೋಲಾರ್ ಹೀಟರ್ ವ್ಯವಸ್ಥೆ ಹಾಗೂ ನೀರು ಶುದ್ಧಿಕರಣ ಘಟಕ ಪ್ರಾರಂಭಿಸುವ ಮೂಲಕ 1 ರೂಪಾಯಿನಲ್ಲಿ 10 ಲೀಟರ್ ಶುದ್ಧ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ.
 
ರೋಗಿಗಳನ್ನು ನೋಡಲು ಬರುವ ಸಂಬಂಧಿಕರಿಗೆ ವಿಶ್ರಾಂತಿ ಕೊಠಡಿ ತೆರೆಯಲಾಗುವುದು. ಹಾಸನ ಸರ್ಕಾರಿ ಆಸ್ಪತ್ರೆಗೆ ಸಿ.ಟಿ ಸ್ಕ್ಯಾನ್ ಉಪಕರಣ ಸೌಲಭ್ಯ ಕಲ್ಪಿಸಲು ಆದೇಶಿಸಲಾ ಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.