ಆಲೂರು: ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಹುಲ್ಲಹಳ್ಳಿ ಮತ್ತು ಗೇಕರವಳ್ಳಿ ಅವಳಿ ಗ್ರಾಮಗಳು ಅಭಿವೃದ್ಧಿಯಿಂದ ದೂರು ಉಳಿದಿವೆ.
ಈ ಗ್ರಾಮಗಳಲ್ಲಿ ಸುಮಾರು 62 ಕುಟುಂಬಗಳು ನೆಲೆಸಿವೆ. 350ಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಅಭಿವೃದ್ಧಿ ಇಲ್ಲಿ ಮರೀಚಿಕೆ. ಸ್ಥಳೀಯ ಆಡಳಿತ ಗ್ರಾಮಗಳ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ.
ಅವಳಿ ಗ್ರಾಮಗಳು ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ಪಟ್ಟಣಕ್ಕೆ ಸಮೀಪವಿದ್ದರೂ ಆಧುನಿಕತೆಯ ಸೋಂಕು ತಗುಲಿಲ್ಲ. ಬಹುತೇಕ ಜನರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೂಲಿ ಕೆಲಸ ಮಾಡುವವರೂ ಕೆಲವರಿದ್ದಾರೆ.
ಆಲೂರು– ಬಿಕ್ಕೋಡು ಬೈಪಾಸ್ ರಸ್ತೆಯಿಂದ ಈ ಗ್ರಾಮಗಳಿಗೆ ಹೋಗುವ 3 ಕಿ.ಲೋ ಮೀಟರ್ ರಸ್ತೆ ಡಾಂಬರು ಕಾಣದೆ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಅಕ್ಕಪಕ್ಕ ಚರಂಡಿಗಳಲ್ಲದೆ ಮಳೆಗಾಲದಲ್ಲಿ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತದೆ. ಮಾರಮ್ಮ ದೇವಸ್ಥಾನದ ಕಾಮಗಾರಿ ಆಗಬೇಕಾಗಿದೆ. ಗ್ರಾಮದಲ್ಲಿ ಇದ್ದ ಬಸವೇಶ್ವರ ಮತ್ತು ಚನ್ಮಕೇಶವ ದೇವಾಲಯಗಳು ಶಿಥಿಲವಾಗಿದ್ದು, ಇತ್ತೀಚಿಗೆ ಗ್ರಾಮದವರು ಒಟ್ಟು ರೂ 20ಲಕ್ಷ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದಾರೆ.
ಈ ಗ್ರಾಮಗಳ ಸುತ್ತ 5 ಕೆರೆಗಳಿವೆ. ಆದರೆ, ಕರವಳ್ಳಿ ಕೆರೆ, ಕೊಡಗಿನ ಕಟ್ಟೆ ಮತ್ತು ದೊಡ್ಡಕಟ್ಟೆಗೆ ರೈತರು ಹೋಗಿ ಬರಲು ರಸ್ತೆ ಆಗಬೇಕಾಗಿದೆ.
‘ಯಾವ ಶಾಸಕರು ಬಂದರೂ ನಮ್ಮ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ’ ಎಂದು ನಗರ ವ್ಯಾಪ್ತಿಯ ಬಿಜೆಪಿ ಅಧ್ಯಕ್ಷ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಲಿನ ಡೇರಿ, ಶಾಲೆ, ಅಂಗನವಾಡಿ ಕೇಂದ್ರ ಇವೆ. ಆದರೆ, ಸಮುದಾಯ ಭವನ ಇಲ್ಲ. ಗ್ರಾಮಗಳಿಗೆ ಸ್ಮಶಾನದ ಜಾಗವಿಲ್ಲ. ಸ್ತ್ರೀ ಶಕ್ತಿ, ಬಸವೇಶ್ವರ ಸ್ವಸಹಾಯ ಸಂಘ, ಜಲಾನಯನ, ಧರ್ಮಸ್ಥಳ ಸ್ವಸಹಾಯ ಸಂಘಗಳೂ ಈ ಗ್ರಾಮಗಳಲ್ಲಿವೆ.
ಎರಡು ಸೇದುವ ಬಾವಿ ಹಾಗೂ ಎರಡು ಕೊಳವೆಬಾವಿಗಳಿವೆ. ಅವುಗಳ ಕಾಮಗಾರಿ ಆಗಬೇಕಾಗಿದೆ. ವಿದ್ಯುತ್ ವ್ಯವಸ್ಥೆ ಇದೆ. ಆದರೆ. ನಿರ್ವಹಣೆ ಸರಿಯಿಲ್ಲದೆ ಇಲ್ಲಿಯ ನಿವಾಸಿಗಳು ಕೆಲವು ಸಂದರ್ಭದಲ್ಲಿ ಕತ್ತಲೆಯಲ್ಲಿ ಇರಬೇಕಾಗಿದೆ.
ಇಲ್ಲಿಯ ರೈತರು ಭತ್ತ, ರಾಗಿ, ಜೋಳ ಮತ್ತು ಶುಂಠಿ ಹೆಚ್ಚಾಗಿ ಬೆಳೆಯುತ್ತಾರೆ. ಗ್ರಾಮಗಳಲ್ಲಿ ಕೆಲವು ಕಡೆ ಚರಂಡಿ ಆಗಬೇಕಾಗಿದೆ. ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಸೌಲಭ್ಯ, 2 ಡ್ರೈನೇಜ್, 1 ಮೋರಿ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಎರಡು ಗ್ರಾಮಗಳ ಮಧ್ಯೆ ವಾಟೇಹೊಳೆ ನಾಲೆ ಹರಿಯುವುದರಿಂದ ವ್ಯವಸಾಯಕ್ಕೆ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.