ADVERTISEMENT

ಅರೆರೆರೇ ಇದು ಮಳೆ ನೀರಲ್ಲ!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:29 IST
Last Updated 20 ಡಿಸೆಂಬರ್ 2013, 5:29 IST
ನೂರು ಪೂರೈಕೆ ಪೈಪುಗಳಿಗೆ ಅಳವಡಿಸಿದ ವಾಲ್ವ್‌ಗಳಲ್ಲೂ ನೀರು ಸೋರಿ ಚರಂಡಿ ಸೇರುತ್ತಿದೆ.
ನೂರು ಪೂರೈಕೆ ಪೈಪುಗಳಿಗೆ ಅಳವಡಿಸಿದ ವಾಲ್ವ್‌ಗಳಲ್ಲೂ ನೀರು ಸೋರಿ ಚರಂಡಿ ಸೇರುತ್ತಿದೆ.   

ಅರಸೀಕೆರೆ: ಪಟ್ಟಣದ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ನೀವು ಬಂದರೆ ಸಾಕು; ಅರೆರೆರೇ ಇದೇನು ಮಳೆ ಇಲ್ಲಿ ಮಾತ್ರ ಹರಿಯುತ್ತಿದೆ ಎಂದು ಅಚ್ಚರಿ ಪಡುತ್ತೀರಿ.

ಹೌದು. ಪಟ್ಟಣದ ಕೆಲವೆಡೆ ನೀರಿನ ಪೈಪುಗಳು ಒಡೆದು, ವಾಲ್ವ್‌ಗಳಿಂದ ಸೋರಿದ ನೀರು ಇಲ್ಲಿ ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಹನಿ ನೀರಿಗೂ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ಒಂದೆಡೆಯಾದರೆ, ಕೆಲವು ವಾರ್ಡುಗಳಲ್ಲಿ ಮಾತ್ರ ಅಪಾರ ನೀರು ಹರಿದು ವ್ಯರ್ಥವಾಗುತ್ತಿರು­ವುದು ಇನ್ನೊಂದೆಡೆ.

ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಪುರಸಭೆ ಹರಸಾಹಸ ಪಡುತ್ತಿದ್ದರೆ, ವಾಟರ್‌­ಮೆನ್‌ಗಳ ನಿರ್ಲಕ್ಷ್ಯದಿಂದಾಗಿ ನೀರು ಪೋಲಾಗಿ ಚರಂಡಿ ಸೇರುತ್ತಿದೆ. ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಈ ಭಾಗದ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ಕೊಳವೆಗಳು ಒಡೆದಿವೆ. ಇದರಿಂದ ಈ ರಸ್ತೆ ಸದಾಕಾಲ ನೀರಿನಿಂದ ಆವೃತವಾಗಿರುತ್ತದೆ.

ಪೈಪ್‌ಲೈನಿಗೆ ಅಳವಡಿಸಿರುವ ವಾಲ್ವ್‌­ಗಳಲ್ಲಿ, ಬಡಾವಣೆಯ ನಲ್ಲಿಗ­ಳಲ್ಲಿ ಬರುವುದಕ್ಕಿಂತ ಹೆಚ್ಚಿನ ನೀರು ಹರಿದು ಚರಂಡಿ ಸೇರುತ್ತಿದೆ. ಪುರಸಭೆ ಮೊದಲು ಇದನ್ನು ಸರಿಪಡಿಸ ಬೇಕಾಗಿದೆ.

ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 2 ಬೃಹತ್‌ ನೀರಿನ ಟ್ಯಾಂಕುಗಳಿದ್ದು, ಈ ಟ್ಯಾಂಕುಗಳಿಗೆ ಹೇಮಾವತಿ ನೀರು ಹಾಗೂ ನಾಗತಿಹಳ್ಳಿ ಜಲ ಸಂಗ್ರಹಾರದ­ಲ್ಲಿನ ನೀರು ತುಂಬಿಸಿ ವಿವಿಧ ಬಡಾವ­ಣೆಗಳಿಗೆ ಪೂರೈಸಲಾಗುತ್ತದೆ. ಅನೇಕ ಸಂದರ್ಭ­ದಲ್ಲಿ ಟ್ಯಾಂಕುಗಳಲ್ಲಿ ನೀರು ತುಂಬಿ ಉಕ್ಕಿ ಹರಿಯುತ್ತದೆ.

ಅನೇಕ ಬಡಾವಣೆಗಳಲ್ಲಿ ಜನರು ಹನಿ ನೀರಿಗೂ ಪರಸುತ್ತಿರುವಾಗ ಪುರಸಭೆಯ ಅಧಿಕಾರಿಗಳು, ಜನಪ್ರತಿ ನಿಧಿಗಳು ಇದರತ್ತ ಗಮನ ಹರಿಸಿಲ್ಲ ಎಂಬುದು ನಾಗರಿಕರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.