ADVERTISEMENT

ಅವರೆ, ತೊಗರಿ ಹೂವು ಉದುರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 8:45 IST
Last Updated 3 ಡಿಸೆಂಬರ್ 2017, 8:45 IST
ಹಳೇಬೀಡು ಹೋಬಳಿ ಬಸ್ತಿಹಳ್ಳಿಯಲ್ಲಿ ಬೆಳೆದಿರುವ ಅವರೆ
ಹಳೇಬೀಡು ಹೋಬಳಿ ಬಸ್ತಿಹಳ್ಳಿಯಲ್ಲಿ ಬೆಳೆದಿರುವ ಅವರೆ   

ಹಳೇಬೀಡು: ಅಕಾಲಿಕ ಮಳೆಯಿಂದ ಪರಿಣಾಮ ಹಳೇಬೀಡು ಹೋಬಳಿಯ ಅವರೆ ಹಾಗೂ ತೊಗರಿ ಬೆಳೆಗೆ ತೊಡಕಾಗುವ ಸಾಧ್ಯತೆ ಇದೆ. ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆ ಕೈಗೆಟುಕದು ಎಂಬ ಆತಂಕದಲ್ಲಿ ಇದ್ದ ಕೃಷಿಕನಿಗೆ ಈಗ ಸುರಿಯುತ್ತಿರುವ ಮಳೆ ಇನ್ನಷ್ಟು ಚಿಂತೆಗೀಡು ಮಾಡಿದೆ.

ಹಿಂಗಾರು ಹಂಗಾಮಿನ ಅವರೆ ಹಾಗೂ ಮುಂಗಾರು ಬಿತ್ತನೆಯ ತೊಗರಿ ಈಗ ಹೂವಾಗುವ ಹಂತದಲ್ಲಿದೆ. ಕೀಟ ಬಾಧೆ ಸಮಸ್ಯೆ ಈಗಾಗಲೇ ಬಾಧಿಸಿದ್ದು, ಜೊತೆಗೆ ಮಳೆಯೂ ಸಮಸ್ಯೆ ಹೆಚ್ಚಿಸಬಹುದು ಎನ್ನುತ್ತಾರೆ ರೈತ ಬಸವರಾಜು.

‘ಕೆಲವೆಡೆ ಫಸಲು ಹೂ ಕಚ್ಚುವ ಸ್ಥಿತಿಯಲ್ಲಿದೆ. ಇಂತ ಸಮಯದಲ್ಲಿ ಸುರಿಯುತ್ತಿರುವ ಮಳೆಯಿಂದ ಹೂ ಉದುರಬಹುದು ಎಂಬ ಆತಂಕ ಕಾಡುತ್ತಿದೆ ಎಂದು ರೈತ ದಿವಾಕರ ಅಳಲು ತೋಡಿಕೊಂಡರು.

ADVERTISEMENT

ಕಡಲೆ ಬೆಳೆಗೂ ಮಳೆಯ ಪರಿಣಾಮ ತಟ್ಟಿದೆ. ಮಳೆಯಿಂದ ಗಿಡದಲ್ಲಿನ ಹುಳಿ ಅಂಶ ಕುಗ್ಗಲಿದ್ದು, ಹುಳ ಆವರಿಸಲಿದೆ. ಇದರಿಂದ ಇಳುವರಿ ಕುಂಠಿತ ಆಗಬಹುದು ಎನ್ನುತ್ತಾರೆ ಬಂಡಿಲಕ್ಕನಕೊಪ್ಪಲು ರೈತ ಅಣ್ಣಪ್ಪ. ಹಳೇಬೀಡು ಹೋಬಳಿಯಲ್ಲಿ ಈ ಹಂಗಾಮಿನಲ್ಲಿ 150 ಹೆಕ್ಟೇರ್‌ನಲ್ಲಿ ಕಡಲೆ, ತಲಾ 250 ಹೆಕ್ಟೇರ್‌ನಲ್ಲಿ ಅವರೆ, ಹಾಗೂ ಅಲಸಂದೆ ಬಿತ್ತನೆಯಾಗಿದೆ.

* * 

ಮುಂಗಾರು ಹಂಗಾಮಿನ ಬೆಳೆ ಕೈಕೊಟ್ಟವು. ಹಿಂಗಾರು ಬೆಳೆ ನಂಬಿದ್ದೆವು. ಕಳೆದ ತಿಂಗಳು ಸುರಿದ ಮಳೆಗೆ ರಾಗಿ ಕೊಯ್ಲಿಗೆ ತೊಡಕಾಯಿತು. ಈಗ ಅವರೆ ಬೆಳೆಗೂ ಕುತ್ತು ತರುವ ಆತಂಕವಿದೆ.
ದಿವಾಕರ, ರೈತ ಪೊನ್ನಾಥಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.