ADVERTISEMENT

ಆನೆ ದಾಳಿ: ರೈತರ ಬದುಕು ಮೂರಾಬಟ್ಟೆ

ಜಾನೆಕೆರೆ ಆರ್‌.ಪರಮೇಶ್‌
Published 18 ಜೂನ್ 2011, 9:20 IST
Last Updated 18 ಜೂನ್ 2011, 9:20 IST
ಆನೆ ದಾಳಿ: ರೈತರ ಬದುಕು ಮೂರಾಬಟ್ಟೆ
ಆನೆ ದಾಳಿ: ರೈತರ ಬದುಕು ಮೂರಾಬಟ್ಟೆ   

ಸಕಲೇಶಪುರ: ಆಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಪ್ರಾಣ ಹಾನಿ ಹಾಗೂ ಬೆಳೆ ನಷ್ಟದಿಂದ  ರೈತರ ಬದುಕು ಮೂರಾಬಟ್ಟೆಯಾಗಿದೆ.

ಹತ್ತು ವರ್ಷಗಳ ಹಿಂದೆ ತಾಲ್ಲೂಕಿನ ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ಕೆಲವು ಬೆರಳೆಣಿಕೆ ಗ್ರಾಮಗಳ ಮೂಲಕ ವರ್ಷದಲ್ಲಿ ಒಂದೆರಡುಬಾರಿ ಕಾಡಾನೆಗಳು ರಾತ್ರಿ ಸಮಯದಲ್ಲಿ ಹಾದು ಹೋಗುತ್ತಿದ್ದವು. ಬೆಳೆ ಹಾನಿ ಹಾಗೂ ಪ್ರಾಣ ಹಾನಿ ಮಾಡಿರುವ ಬಗ್ಗೆ ಮಲೆನಾಡಿನ ಗ್ರಾಮಗಳಲ್ಲಿ ದಾಖಲೆಗಳಿಲ್ಲ.
 
ಎಂಟು  ವರ್ಷಗಳಿಂದ ಈಚೆಗೆ ತಾಲ್ಲೂಕಿನ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಕಾಡಾನೆಗಳ ನಿರಂತರ ದಾಳಿಯಿಂದ ತತ್ತರಿಸುತ್ತಿವೆ.

ಜಲವಿದ್ಯುತ್ ಯೋಜನೆಗಳು ಕಾರಣ: ಆನೆಗಳು ಕಾಡು ಬಿಟ್ಟು ನಾಡಿನತ್ತ ವಲಸೆ ಹೊಗುತ್ತಿರುವುದಕ್ಕೆ ಪಶ್ಚಿಮಘಟ್ಟದ ದಟ್ಟ ಮಳೆಕಾಡುಗಳನ್ನು ನಾಶ ಮಾಡುತ್ತಿರುವ ಕಿರು ಜಲವಿದ್ಯುತ್ ಯೋಜನೆಗಳು ಕಾರಣ ಎಂಬುದಕ್ಕೆ ಬೇರೆ ಯವುದೇ ಸಾಕ್ಷಿಗಳು       ಬೇಕಿಲ್ಲ.

ಅರಣ್ಯ ಇಲಾಖೆ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಸುಮಾರು 22 ಸಾವಿರ ಹೆಕ್ಟೇರ್ ರಕ್ಷಿತ ಅರಣ್ಯ ಪ್ರದೇಶವಿದ್ದು, ಅದರಲ್ಲಿ ಶೇ.90ಕ್ಕೂ ಹೆಚ್ಚು ಅರಣ್ಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟದ್ದಾಗಿದೆ. ಕೊಡಗು, ಹಾಸನ-ಚಿಕ್ಕಮಗಳೂರು ಈ ಮೂರು ಜಿಲ್ಲೆಗಳ ಪಶ್ಚಿಮಘಟ್ಟದ ದಟ್ಟ ಅರಣ್ಯಗಳಲ್ಲಿ ಅಡ್ಡಾಡಿಕೊಂಡು ಬದುಕುತ್ತಿದ್ದ ಆನೆಗಳು, ಇದೀಗ ಕಾಡು ಅಂಚಿನ ಗ್ರಾಮಗಳನ್ನೂ ಬಿಟ್ಟು 30-40 ಕಿ.ಮೀ. ದೂರದ ಗ್ರಾಮಗಳವರೆಗೂ ಆಹಾರ ಹಾಗೂ ನೆಲೆ ಅರಸಿ ದಿಕ್ಕೆಟ್ಟು ಅಲೆಯುತ್ತಿವೆ.

ತಾಲ್ಲೂಕಿನ ಪಶ್ಚಿಮಘಟ್ಟದ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳಿಗೆ ಸರ್ಕಾರ ಪರವನಾಗಿ ನೀಡಿದ್ದು, ಅವುಗಳಲ್ಲಿ ಕೆಂಪುಹೊಳೆ ರಕ್ಷಿತ ಅರಣ್ಯದಲ್ಲಿ  18 ಮೆಗಾವಾಟ್ ಸಾಮರ್ಥ್ಯದ ಐಪಿಸಿಎಲ್ ಹೈಡ್ರೋ ಪವರ್ ಪ್ರಾಜೆಕ್ಟ್,  ಕೆಂಪು ಹೋಳೆ ಹಾಗೂ ಕಾಗಿನಹರೆ ರಕ್ಷಿತ ಅರಣ್ಯಗಳಲ್ಲಿ  ಕೆಪಿಟಿಸಿಎಲ್‌ನ 66 ಕೆವಿ ವಿದ್ಯುತ್ ಮಾರ್ಗ,

ಕೆಂಪು ಹೋಳೆ ಹಾಗೂ ಮೂರ್ಕಣ್‌ಗುಡ್ಡ ರಕ್ಷಿತ ಅರಣ್ಯ ಪ್ರದೇಶದಲ್ಲಿ `ಪಶ್ಚಿಮ್ ಹೈಟ್ರೋ ಎನರ್ಜಿ ಪ್ರೈ.ಲಿ. ಹೈದ್ರಬಾದ್~ 15 ಮೆಗಾವಾಟ್ ವಿದ್ಯುತ್ ಘಟಕ,  ಬೆಂಗಳೂರಿನ ಪಿನಾಕಲ್ ಗ್ರೀನ್ ಪವರ್ ಪ್ರೈ.ಲಿ. 13 ಮೆಗಾವಾಟ್, ಬೆಂಗಳೂರಿನ `ಅಬಿಲ್ ಬೀರು ಕಿರು ಜಲ ವಿದ್ಯುತ್ ಯೋಜನೆ~

13 ಮೆಗಾವಾಟ್  ಕೆಂಚನಕುಮರಿ ಹಾಗೂ ಕಾಗಿನಹರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ, ಗುಂಡ್ಯಾ ಜಲ ವಿದ್ಯುತ್ ಯೋಜನೆ 300 ಮೆಗಾವಾಟ್, ಇದೇ ರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಗಳೂರಿನ ಮಾರುತಿ ಪವರ್ ಜಿನ್ (ಇಂಡಿಯಾ) ಪ್ರೈ.ಲಿ. 18.9 ಮೆಗಾವಾಟ್ ಹಾಗೂ 19 ಮೆಗಾವಾಟ್‌ನ ಎರಡು ವಿದ್ಯುತ್ ಘಟಕಗಳು ಸೇರಿದಂತೆ, ರಕ್ಷಿತ ಅರಣ್ಯ ಪ್ರದೇಶದಲ್ಲಿ ಸರ್ಕಾರ  ಒಟ್ಟು 173 ಹೆಕ್ಟೇರ್ ಪ್ರದೇಶದಲ್ಲಿ ಈ ಕಿರು ಜಲ ವಿದ್ಯುತ್ ಯೋಜನೆಗೆ ಖಾಸಗಿ ಕಂಪನಿಗಳಿಗೆ ಪರವನಾಗಿ ನೀಡಿದೆ.

ಆದರೆ ಸರ್ಕಾರ ಒಂದು ಯೋಜನೆಗೆ ನೀಡುವ ಪರವನಾಗಿ 4 ಹೆಕ್ಟೇರ್ ಆದರೆ, ಯೋಜನೆಗೆ 15ರಿಂದ 20 ಹೆಕ್ಟೇರ್ ಪ್ರದೇಶ ಬಳಕೆಯಾಗುತ್ತಿದೆ.

ಇತ್ತೀಚೆಗೆ ರಾಜ್ಯ ವನ್ಯ ಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ, ಮಾರುತಿ ಪವರ್ ಜಿನ್ (ಇಂಡಿಯಾ) ಪ್ರೈ.ಲಿ. ಕಂಪೆನಿ  ಕೆಂಚನಕುಮರಿ ಹಾಗೂ ಕಾಗಿನಹರೆ ರಕ್ಷಿತ ಅರಣ್ಯದಲ್ಲಿ ನಿರ್ಮಿಸುತ್ತಿರುವ ವಿದ್ಯುತ್ ಘಟಕಕ್ಕೆ ಭೇಟಿ ನೀಡಿದಾಗ ಯೋಜನೆಯಿಂದ ಅಲ್ಲಿ ಅರಣ್ಯ ನಾಶವಾಗಿರುವುದು ಕಂಡು ಮರುಗಿದರು.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯುತ್ ಉತ್ಪಾದನಾ ಘಟಕ ಸುಮಾರು 2 ಕಿ.ಮೀ. ದೂರದಲ್ಲಿದ್ದು, ದಟ್ಟ ಕಾಡನ್ನು ಕಡಿದು ವಾಹನಗಳ ಸಂಚರಿಸುವಂತಹ ರಸ್ತೆ ನಿರ್ಮಾಣ, ದೊಡ್ಡ ಬೆಟ್ಟವೊಂದನ್ನು ಸಿಡಿಮದ್ದುಗಳನ್ನು ಬಳಸಿ ಸೀಳಿ ಸುರಂಗ ನಿರ್ಮಾಣ, ಬೆಟ್ಟವನ್ನು ಕೊರೆದಾಗ ಅಲ್ಲಿಯ ಸಾಕಷ್ಟು ಪ್ರಮಾಣದ ಕಲ್ಲನ್ನು ತಗ್ಗು ಪ್ರದೇಶಕ್ಕೆ ತಳ್ಳಿ ಅರಣ್ಯ ನಾಶ, ಮಿನಿ ಡ್ಯಾಂ, ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸಲು ಸುರಂಗ ಮಾರ್ಗ, ಉತ್ಪಾದನೆಯಾದ ವಿದ್ಯತ್ ಅನ್ನು ಗ್ರಿಡ್‌ಗೆ ಹರಿಸಲು ಹೈ ಟೆನ್ಷನ್ ಮಾರ್ಗ ಹೀಗೆ ಒಂದೊಂದು ವಿದ್ಯುತ್ ಉತ್ಪಾದನಾ ಘಟಕಕ್ಕೆ ಪಶ್ಚಿಮಘಟ್ಟದ ದಟ್ಟ ಅರಣ್ಯ ಸಾಕಷ್ಟು ಪ್ರಮಾಣದಲ್ಲಿ ನಾಶಗೊಳ್ಳುತ್ತಿದೆ. ಇದರ ಪರಿಣಾಮವೇ ಆನೆಗಳು, ಕಾಟಿಗಳು, ಹುಲಿಗಳು ಸೇರಿದಂತೆ ವನ್ಯ ಜೀವಿಗಳು ಕಾಡು ಬಿಟ್ಟು ನಾಡಿನತ್ತ ವಲಸೆ ಬರುವುದಕ್ಕೆ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.