ADVERTISEMENT

ಇಂದಿನ ಮಕ್ಕಳಲ್ಲಿ ಕನಸುಗಳಿಲ್ಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 9:24 IST
Last Updated 8 ಡಿಸೆಂಬರ್ 2017, 9:24 IST
ಸಮ್ಮೇಳನದಲ್ಲಿ ಗುರುವಾರ ಜಾನಪದ ಸಾಹಿತಿ ಡಾ.ಚಂದ್ರು ಕಾಳೇನಹಳ್ಳಿ ಮಾತನಾಡಿದರು
ಸಮ್ಮೇಳನದಲ್ಲಿ ಗುರುವಾರ ಜಾನಪದ ಸಾಹಿತಿ ಡಾ.ಚಂದ್ರು ಕಾಳೇನಹಳ್ಳಿ ಮಾತನಾಡಿದರು   

ಚನ್ನರಾಯಪಟ್ಟಣ (ಕುವೆಂಪು ವೇದಿಕೆ): ಇಂದಿನ ಮಕ್ಕಳಲ್ಲಿ ಕನಸುಗಳು ಇಲ್ಲ ಎಂದು ಜಾನಪದ ಸಾಹಿತಿ ಡಾ.ಚಂದ್ರು ಕಾಳೇನಹಳ್ಳಿ ಗುರುವಾರ ಹೇಳಿದರು. ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಸನ ಜಿಲ್ಲೆಯ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಹಾಗೂ ಮಕ್ಕಳ ಮನೋ ದೈಹಿಕ ವಿಕಸನದಲ್ಲಿ ಗ್ರಾಮೀಣ ಕ್ರೀಡೆಗಳ ಮಹತ್ವ ಎಂಬ ವಿಷಯಗಳ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಿಂದೆ ಅಜ್ಜ, ಅಜ್ಜಿಯರು ಮಕ್ಕಳಿಗೆ ಕಥೆ ಹೇಳುವ ಮೂಲಕ ಕನಸು ತುಂಬುತ್ತಿದ್ದರು. ಅದರೆ ಇಂದು ಅಜ್ಜ, ಅಜ್ಜಿಯರು ವೃದ್ಧಾಶ್ರಮ ಸೇರಿರುವುದರಿಂದ ಮಕ್ಕಳಲ್ಲಿ ಕನಸುಗಳೇ ಇಲ್ಲ ಎಂದರು.

ಸಾಹಿತಿ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ‘ಮಕ್ಕಳಲ್ಲಿ ಸಮಯ ಪ್ರಜ್ಞೆಯನ್ನು ಶಿಕ್ಷಕರು ಮತ್ತು ಪೋಷಕರು ಕಲಿಸಬೇಕು’ ಎಂದರು. ಹಾಸನ ಜಿಲ್ಲೆಯ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ವಿಷಯವನ್ನು ಆರ್‌. ಪುಣ್ಯಾ ಮಂಡಿಸಿದರು. ಮಕ್ಕಳ ಮನೋ ದೈಹಿಕ ವಿಕಸನದಲ್ಲಿ ಗ್ರಾಮೀಣ ಕ್ರೀಡೆಗಳ ಮಹತ್ವ ವಿಷಯವನ್ನು ಎಸ್‌. ವೈಶಾಖ್‌ ಮಂಡಿಸಿದರು.

ADVERTISEMENT

ಗೋಷ್ಠಿಯ ಅಧ್ಯಕ್ಷತೆಯನ್ನು ಎನ್‌.ಎನ್‌.ಆಕಾಶ್‌ ವಹಿಸಿದ್ದರು. ಕೆ.ವಿ.ಕೃತಿಕಾ, ಆರ್‌.ರಕ್ಷಾಮಾತನಾಡಿದರು. ಮಕ್ಕಳ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಅಧ್ಯಕ್ಷ ಸುರೇಶ್‌ ಗುರೂಜಿ, ಹೊಳೆನರಸೀಪುರ ತಾಲ್ಲೂಕು ಘಟಕ ಅಧ್ಯಕ್ಷ ಪುಟ್ಟೇಗೌಡ ಇದ್ದರು. ಮರಳು, ಗಣಿ ಮಾಫಿಯಾದಿಂದ ನಾಡು ನಲುಗುತ್ತಿದೆ

ಮರಳು, ಗಣಿ ಮಾಫಿಯಾದಿಂದ ನಾಡು ಬರಿದಾಗುತ್ತಿದೆ ಎಂದು ಜಾನಪದ ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು. ಗುರುವಾರ ಪಟ್ಟಣದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡನೆಲ, ಜಲಮತ್ತು ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಮೌಢ್ಯತೆಯ ನಿವಾರಣೆಯಲ್ಲಿ ಶಿಕ್ಷಣ ಮತ್ತು ಯುವಜನತೆಯ ಪಾತ್ರ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವರು ಹಣದಾಸೆಗಾಗಿ ಮರಳು, ಮಣ್ಣು ಮಾರಾಟ ಮಾಡುತ್ತಿರುವುದರಿಂದ ನಾಡು ನಲುಗುತ್ತಿದೆ. ನಾಡಿನಲ್ಲಿ ಕೃಷಿ ಸಂಸ್ಕೃತಿ ಇರಬೇಕೆ ಹೊರತು ಗಣಿ ಸಂಸ್ಕೃತಿಯಲ್ಲ. ಭವಿಷ್ಯದ ಜನಾಂಗದ ದೃಷ್ಠಿಯಿಂದ ಭೂಮಿಯ ಸಂಪತ್ತನ್ನು ಕಾಪಾಡಬೇಕಿದೆ ಎಂದು ಹೇಳಿದರು. ಅಂತರ್ಜಲ ಬರಿದಾಗುತ್ತಿರುವ ಈ ದಿನಗಳಲ್ಲಿ ಕೃಷಿ, ಗೃಹಬಳಕೆ ಹಾಗೂ ಕೈಗಾರಿಕೆಯ ಚಟುವಟಿಕೆಗಳಿಗೆ ನೀರನ್ನು ಮಿತವಾಗಿ ಬಳಸುವ ವಿವೇಚನೆ ಅಗತ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ಡಿ.ಎಸ್‌. ನಿಸರ್ಗಾ, ಎಂ. ಚಂದನ್‌, ಸಿ.ಎನ್‌. ಚಂದನಾ ಮೈಮ್‌, ಧೀಮಂತ್‌, ಉಜ್ವಲ್‌ ಮಾತನಾಡಿದರು. ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ ಪುಟ್ಟರಾಜು, ಮಹಿಳಾ ಲೇಖಕಿಯರ ಸಂಘ ಜಿಲ್ಲಾ ಘಟಕ ಅಧ್ಯಕ್ಷೆ ಸುಕನ್ಯಾ, ಪತ್ರಕರ್ತ ಪುಟ್ಟಣ್ಣ, ಸಿ.ಜಿ. ಸೋಮಶೇಖರ್ ಈ ಸಂದರ್ಭದಲ್ಲಿ ಇದ್ದರು.

ವ್ಯವಸ್ಥಿತ ಊಟ

ಚನ್ನರಾಯಪಟ್ಟಣ (ಕುವೆಂಪು ವೇದಿಕೆ): ಹಲವು ಸಾಹಿತ್ಯ ಸಮ್ಮೇಳನದಲ್ಲಿ ಊಟದ ಬಗ್ಗೆಯೇ ಹೆಚ್ಚು ಆರೋಪಗಳು ಕೇಳಿಬರುತ್ತವೆ. ಆದರೆ ನಗರದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಎರಡು ದಿನವೂ ವ್ಯವಸ್ಥಿತವಾಗಿ ಊಟವನ್ನು ಬಡಿಸಲಾಯಿತು.

ಗುರುವಾರ ಪಲಾವ್‌, ಬಾದಾಂಪುರಿ, ಮೊಸರನ್ನ ನೀಡಲಾಯಿತು. ಪ್ರತಿ ನಿತ್ಯ ಸುಮಾರು 5 ಸಾವಿರ ಮಕ್ಕಳು ಊಟ ಮಾಡಿದ್ದಾರೆ ಎಂದು ಅಡುಗೆ ತಯಾರಕ ಕುಮಾರ್ ಹೇಳಿದರು.

ಎಲ್ಲ ಮಕ್ಕಳಿಗೂ ಶುದ್ಧ ಕುಡಿಯುವ ನೀರನ್ನು ಸ್ವಯಂ ಸೇವಕರು ನೀಡಿದರು. ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಆಶೋಕ್ ಮತ್ತು ಶಾಸಕ ಸಿ.ಎನ್.ಬಾಲಕೃಷ್ಣ ಅಗಾಗ ಊಟ ನೀಡುತ್ತಿದ್ದ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಶಿಕ್ಷಕರು, ಸ್ವಯಂ ಸೇವಕರ ಸೇವೆಯೂ ಯಶಸ್ಸಿಗೆ ಕಾರಣ ಎನ್ನಬಹುದು.

ಕಡಿಮೆ ದರದ ಪುಸ್ತಕಗಳಿಗೆ ಬೇಡಿಕೆ

ಚನ್ನರಾಯಪಟ್ಟಣ (ಕುವೆಂಪು ವೇದಿಕೆ): ಸಮ್ಮೇಳನದಲ್ಲಿ ಸುಮಾರು 60 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು ₹ 10ರಿಂದ ₹ 40ರವರೆಗಿನ ದರದ ಪುಸ್ತಕಗಳನ್ನು ಹೆಚ್ಚಾಗಿ ಖರೀದಿಸಿದರು.

ಸಾಮಾನ್ಯ ಜ್ಞಾನ, ನಾಯಕರ ಚರಿತ್ರೆಗಳಿರುವ ಪುಸ್ತಕಗಳು ಹೆಚ್ಚಾಗಿ ಮಾರಾಟ ವಾದವು ಎಂದು ಬೆಂಗಳೂರಿನಿಂದ ಪುಸ್ತಕ ಮಾರಾಟ ಮಾಡಲು ಬಂದಿದ್ದ ಜಯರಾಂ ಹೇಳಿದರು.

₹ 10ರ ಬೆಲೆಯ ನಾಲ್ಕು ಪುಸ್ತಕಗಳನ್ನು ಖರೀದಿಸಿದ್ದೇನೆ, ಮಕ್ಕಳಿಗೆ ಬೇಕಾದ ಒಳ್ಳೆಯ ಪುಸ್ತಕಗಳು ಬಂದಿವೆ ಎಂದು ಶೆಟ್ಟಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮಿ ಹೇಳಿದರು.

ಆದರೂ ಬಹುತೇಕ ಪುಸ್ತಕ ಮಳಿಗೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಈ ಬಗ್ಗೆ ಸಮ್ಮೇಳನದ ಸಂಘಟಕರು ಧ್ವನಿವರ್ಧಕದ ಮೂಲಕ ಆಗಾಗ ಮಾಹಿತಿ ನೀಡಬೇಕಿತ್ತು ಎಂದು ಬೆಂಗಳೂರಿನ ಇಸ್ಕಾನ್‌ ಸಂಸ್ಥೆಯ ಪುಸ್ತಕ ಮಾರಾಟಗಾರ ಶಿವಕುಮಾರ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.