ADVERTISEMENT

ಇಲ್ಲಗಳ ನಡುವೆ ಸಾಗುತಿದೆ ಬದುಕು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:55 IST
Last Updated 12 ಅಕ್ಟೋಬರ್ 2011, 6:55 IST

ಹಳೇಬೀಡು: ಮಳೆ ಬಿದ್ದರೆ ಕೆಸರುಗದ್ದೆಯಂತಾಗುವ ಕೊರಕಲು ರಸ್ತೆ. ಅಕ್ಕ ಪಕ್ಕದಲ್ಲಿ ಕೊಚ್ಚೆ ತುಂಬಿದ ಚರಂಡಿ. ಬಡಾವಣೆ ಪ್ರವೇಶಿಸಿದಾಕ್ಷಣ ದರ್ಶನವಾಗುವ ಕಸದ ರಾಶಿ. ಸೊಳ್ಳೆ ತಾಣದಲ್ಲಿಯೇ ಅಂಗನವಾಡಿಯಲ್ಲಿ ಕಲಿಯುವ ಕಂದಮ್ಮಗಳು ಇದು ಅಂಬೇಡ್ಕರ್ ನಗರ ಎಂದು ಕರೆಯುವ ಹಳೇಬೀಡಿನ ಆದಿಕರ್ನಾಟಕ ಕಾಲೋನಿಯನ್ನು ಒಂದು ಸುತ್ತ ತಿರುಗಿದರೆ ಕಂಡುಬರುವ ದೃಶ್ಯ.

ಪರಿಶಿಷ್ಟ ಜನಾಂಗ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರಾದು ಸಾಕಷ್ಟು ಸವಲತ್ತುಗಳಿದ್ದರೂ ಕಾಲೋನಿಯ ಮಕ್ಕಳು ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೊಟ್ಟೆಪಾಗಾಗಿ ಪೋಷಕರು ಕೂಲಿ ಕೆಲಸಕ್ಕೆ ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಮನೆಯಿಂದ ಹೊರಹೋಗುತ್ತಾರೆ. ಮುಂದಿನ ಭವಿಷ್ಯದ ಚಿಂತೆ ಇಲ್ಲದ ಸಾಕಷ್ಟು ಮಕ್ಕಳು ಶಾಲೆ ಬಿಟ್ಟು ಹೊರಗುಳಿಯುತ್ತಿದ್ದಾರೆ. ಶಿಕ್ಷಕರು ಮನೆಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಶಾಲೆ ಬಿಟ್ಟಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎನ್ನುತ್ತಾರೆ ಮಂಜು.

ಗ್ರಾಮ ಪಂಚಾಯತಿ ಬೀದಿ ದೀಪ ಅಳವಡಿಸಿದೆ. ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದೆ. ಹೀಗಾಗಿ ಕುಡಿಯುವ ನೀರಿಗೆ ಅಷ್ಟೇನು ಸಮಸ್ಯೆ ಇಲ್ಲ. ಚರಂಡಿಗಳು ತುಂಬಿತುಳುಕುತ್ತಿದ್ದು, ಸೊಳ್ಳೆಗಳ ತಾಣವಾಗಿದೆ. ಕಾಲೋನಿಯ ಮುಖ್ಯರಸ್ತೆ ಮಣ್ಣಿನ ರಸ್ತೆಯಾಗಿದ್ದು ಗುಂಡಿಗಳಿಂದ ಕೂಡಿದೆ. ಬೇಸಿಗೆಯಲ್ಲಿ ಧೂಳು ತುಂಬಿಕೊಂಡರೆ, ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಈ ರಸ್ತೆ ಹೊಯ್ಸಳ ಬಡಾವಣೆ ಹಾಗೂ ಜನತಾ ಕಾಲೋನಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆಗೆ ಕಾಂಕ್ರಿಟ್ ಹಾಕಲು ಸಮಾಜ ಕಲ್ಯಾಣ ಇಲಾಖೆಯಿಂದ ರೂ.10ಲಕ್ಷ ಮಂಜೂರಾಗಿದೆ ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ದೊರಕಿದರೆ ಅನುಕೂಲ ಎನ್ನುತ್ತಾರೆ ಕಾಲೋನಿ ನಿವಾಸಿಗಳು.

400ಕ್ಕೂ ಹೆಚ್ಚು ಮನೆಗಳಿರುವ ಕಾಲೋನಿಯಲ್ಲಿ ಸುಮಾರು 2000ದಷ್ಟು ಜನಸಂಖ್ಯೆ ಇದೆ. ಸುಮಾರು 70 ಮನೆಗಳು ಶಿಥಿಲಾವಸ್ಥೆ ತಲುಪಿವೆ. ಕೆಲವು ಮನೆಗಳಲ್ಲಿ ಮಾತ್ರ ಶೌಚಾಲಯ ಇದೆ. ಸ್ವಚ್ಚ ನಿರ್ಮಲ ಗ್ರಾಮ ಯೋಜನೆ ಅನುದಾನ ಬಂದರೂ ಮನೆ ಸುತ್ತಮುತ್ತ ಜಾಗದ ಕೊರತೆಯಿಂದ ಶೌಚಾಲಯ ನಿರ್ಮಿಸಿಕೊಳ್ಳುವುದು ಸುಲಭ ಸಾಧ್ಯವಾಗಿಲ್ಲ. ಅವಕಾಶ ಇರುವರಿಗೆ ಶೌಚಾಲಯ ನಿರ್ಮಿಸಿಕೊಟ್ಟು, ಉಳಿದವರಿಗೆ ಗುಂಪು ಶೌಚಾಲಯ ನಿರ್ಮಿಸಿಕೊಡಬೇಕು ಎಂಬುದು ಕಾಲೋನಿ ನಿವಾಸಿಗಳ ಬೇಡಿಕೆಯಾಗಿದೆ.

ಸಮುದಾಯ ಭವನ ಚಿಕ್ಕದಾಗಿದ್ದು, ಶುಭ ಕಾರ್ಯ ನಡೆಸಲು ಬೇರೆ ಸ್ಥಳ ಅವಲಂಬಿಸುವಂತಾಗಿದೆ. ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿದ್ದ ಅಂಗನವಾಡಿ ಕೇಂದ್ರ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದೆ. ಕಟ್ಟಡ ಶಿಥಿಲಾವಸ್ಥೆ ತಲುಪಿ ಸೋರಿಕೆಯಾಗುತ್ತಿದೆ. ನೆಲದ ಸಿಮೆಂಟ್ ಕಿತ್ತುಹೋಗಿ ಗುಂಡಿಬಿದ್ದಿದೆ. ಕಟ್ಟಡದ ಮುಂಭಾಗದಲ್ಲಿ ಕೊಚ್ಚೆ ತುಂಬಿದ ಚರಂಡಿ ತೆರೆದ ಸ್ಥಿತಿಯಲ್ಲಿದ್ದು, ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.