ಚನ್ನರಾಯಪಟ್ಟಣ: ಬ್ಲಾಕ್ ಶಿಕ್ಷಣಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿಯೇ ಇರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳು ಶಿಥಿಲಗೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ.
1917ರಲ್ಲಿ ಬ್ರಿಟಿಷರ ಕಾಲದಲ್ಲಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಿಸಲಾಯಿತು. ಅನೇಕ ರಾಜಕಾರಣಿಗಳು, ಸಾಹಿತಿಗಳು ಈ ಶಾಲೆಯಲ್ಲಿ ಓದಿದ ಹೆಗ್ಗಳಿಕೆ ಇದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಂಡಂತೆ 1989ರಲ್ಲಿ ಎರಡು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಯಿತು.
ಈ ಹೆಚ್ಚುವರಿ ಕೊಠಡಿಗಳ ಮೇಲ್ಛಾವಣಿ ಸಿಮೆಂಟ್ ಅಲ್ಲಲ್ಲಿ ಕುಸಿದು ಬಿದ್ದಿದ್ದೆ. ಅಷ್ಟು ಮಾತ್ರವಲ್ಲ ಮೇಲ್ಛಾವಣಿ ಅಸ್ಥಿ ಪಂಜರದಂತೆ ಗೋಚರಿಸುತ್ತದೆ. ಮುಂಜಾಗ್ರತಾ ಕ್ರಮವಾಗಿ 2 ವರ್ಷಗಳಿದ ಈ ಕೊಠಡಿಯಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಒಂದು ಕೊಠಡಿಯಲ್ಲಿ ಸೈಕಲ್‌ಗಳನ್ನು ಮತ್ತೊಂದರಲ್ಲಿ ಹಳೆಯ ಕುರ್ಚಿ, ಮೇಜುಗಳನ್ನು ತುಂಬಲಾಗಿದ್ದು ಅವುಗಳು ಧೂಳು ಹಿಡಿದು ಭೂತ ಬಂಗಲೆಯಂತೆ ಕಾಣುತ್ತದೆ.
ಹಜಾರದಲ್ಲಿ ನಿಂತುಕೊಳ್ಳಲು ಭಯವಾಗುತ್ತದೆ. ಏಕೆಂದರೆ ಯಾವ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದು ಬೀಳುತ್ತದೆ ಎನ್ನುವ ಆತಂಕವನ್ನು ಇಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವ್ಯಕ್ತಪಡಿಸುತ್ತಾರೆ.112 ವಿದ್ಯಾರ್ಥಿಗಳಿರುವ ಈ ಶಾಲೆಗೆ 11 ಕೊಠಡಿಗಳ ಅವಶ್ಯಕತೆ ಇದೆ. ಸದ್ಯ 9 ಕೊಠಡಿಗಳಿವೆ. ಅದರಲ್ಲಿ 2 ಕೊಠಡಿಗಳನ್ನು ಪ್ರೌಢಶಾಲೆಗೆ ಬಿಟ್ಟುಕೊಡಲಾಗಿದೆ. ಉಳಿದ 5 ಕೊಠಡಿಗಳನ್ನು ಮಾತ್ರ ಪಾಠ, ಪ್ರವಚನ ಮಾಡಲು ಬಳಸಿ ಕೊಳ್ಳಲಾಗುತ್ತಿದೆ.
ಕೊಠಡಿಗಳ ಕೊರತೆ ಇದೆ. ಶಿಥಿಲಗೊಂಡಿರುವ ಎರಡು ಕೊಠಡಿಗಳ ಮೇಲ್ಛಾವಣೆಯಲ್ಲಿ ಚುರುಕಿ ಹಾಕಿ ದುರಸ್ತಿ ಮಾಡಿಕೊಟ್ಟರೆ ತರಗತಿ ನಡೆಸಲು ಅನುಕೂಲವಾಗುತ್ತದೆ. ಪಟ್ಟಣದ ಹೃದಯ ಭಾಗದಲ್ಲಿರುವ ಅದರಲ್ಲೂ ಬಿಇಒ ಕಚೇರಿ ಹಿಂಭಾಗದಲ್ಲಿರುವ ಶಾಲೆಯ ಕಥೆ ಈ ರೀತಿಯಾದರೆ ತಾಲ್ಲೂಕಿನ ಇತರೆ ಭಾಗದಲ್ಲಿರುವ ಶಾಲೆಗಳ ಸ್ಥಿತಿ ಏನು ಎಂಬುದು ಜನತೆಯ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.