ADVERTISEMENT

ಉಗ್ರಾಣ ಈಗ ಅನಧಿಕೃತ ಶೌಚಾಲಯ!

ಪ್ರಸನ್ನಕುಮಾರಸುರೆ
Published 1 ಅಕ್ಟೋಬರ್ 2011, 9:10 IST
Last Updated 1 ಅಕ್ಟೋಬರ್ 2011, 9:10 IST

ಬಾಣಾವರ: ಪಟ್ಟಣದಲ್ಲಿರುವ ಸಾವಿರಾರು ವರ್ಷದ ಹಳೆಯ ಉಗ್ರಾಣ ಶಿಥಿಲಗೊಂಡು ಅವ್ಯವಸ್ಥೆಯ ಅಗರವಾಗಿದೆ.  ಪಟ್ಟಣದ ದೇವಾಲಯ ಬೀದಿಯಲ್ಲಿರುವ ಉಗ್ರಾಣ ಶಿಥಿಲ ಗೊಂಡು ಕುಸಿದು ಬೀಳುವ ಹಂತದಲ್ಲಿದೆ. ಹಿಂದೆ ಪಾಳೆಯಗಾರರು ಇದನ್ನು  ಉಗ್ರಾಣವನ್ನಾಗಿ ಮಾಡಿಕೊಂಡಿದ್ದರು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ.

 ಆದರೆ ಇತಿಹಾಸವನ್ನು ಮರೆತ ಜನತೆ ಅದನ್ನು ಈಗ ಸಾರ್ವಜನಿಕ ಶೌಚಾಲಯವನ್ನಾಗಿ ಮಾಡಿಕೊಂಡಿರುವುದು ದುರಂತದ ವಿಚಾರ. ಎತ್ತ ನೋಡಿದರು ಮುಳ್ಳುಗಳ ರಾಶಿ, ಚಪ್ಪಲಿ ಇಲ್ಲದೆ ಉಗ್ರಾಣದೊಳಗೆ ಕಾಲಿಡಲು ಆಗುವುದಿಲ್ಲ. ಉಗ್ರಾಣದ ಪಕ್ಕದಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಇದೆ.

ಉಗ್ರಾಣದ ಪಕ್ಕದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಮಕ್ಕಳು ದಿನ ಭಯದಿಂದ ಪಾಠ ಕೇಳುವಂತಾಗಿದೆ. ಏಕೆಂದರೆ ಯಾವ ಸಮಯದಲ್ಲಿ ಉಗ್ರಾಣ ಶಾಲೆ ಮೇಲೆ ಬೀಳುವುದೋ ಎಂಬ ಭಯ ಹಾಗೂ ಉಗ್ರಾಣದೂಳಗಿರುವ ವಿಷ ಜಂತುಗಳು ಶಾಲೆ ಒಳಗೆ ಬರಲಿದೆ ಎಂಬ ಭೀತಿಯಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. 

ಇತಿಹಾಸದ ಸಾಕ್ಷಿಯಂತಿರುವ ಈ ಉಗ್ರಾಣ ಉಳಿಸಿ  ಮುಂದಿನ ಪೀಳಿಗೆಗೆ ಬಿಡಬೇಕಾಗಿರುವ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು  ಗಮನ ಹರಿಸದೆ ಇರುವುದರಿಂದ ಒಂದು ಎಕರೆಯಷ್ಟು ದೊಡ್ಡದಾಗಿರುವ ಈ ಉಗ್ರಾಣದಲ್ಲಿ ಕಸದ ರಾಶಿ ಇದೆ.

   ಜಿಲ್ಲೆಯಲ್ಲೇ ಅತ್ಯಂತ ದೊಡ್ಡದಾಗಿರುವ ಹೋಬಳಿ ಕೇಂದ್ರ ಬಾಣಾವರದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದೆ. 8 ಪ್ರಾಥಮಿಕ ಶಾಲೆ, 4 ಪ್ರೌಢಶಾಲೆ, 2 ಐಟಿಐ ಕಾಲೇಜು, ಪದವಿ ಪೂರ್ವ ಮತ್ತು ಪದವಿ ಕಾಲೇಜಿಗೆ ಸೇರಿದ ಸುಮಾರು 2,500 ವಿದ್ಯಾರ್ಥಿಗಳು ಮತ್ತು ಅಂದಾಜಿನಂತೆ 3-4 ಸಾವಿರ ಹಿರಿಯ ನಾಗರಿಕರು ಇದ್ದಾರೆ. ಇಷ್ಟು ದೊಡ್ಡ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಒಂದು ಕ್ರೀಡಾಂಗಣವಾಗಲಿ ಅಥಾವ ಉದ್ಯಾನವಾಗಲಿ  ಇಲ್ಲ. ದುಸ್ಥಿತಿಯಲ್ಲಿರುವ ಈ ಉಗ್ರಾಣಕ್ಕೆ ಪುನರ್‌ಜೀವ ನೀಡಬೇಕಿದೆ.

ಬಹಳ ವರ್ಷದಿಂದ ಯಾವುದೇ ಅಭಿವೃದ್ಧಿ ಕಾಣದೆ ನಲುಗಿರುವ ಪಟ್ಟಣದ ಜನತೆ ಆಶಯವನ್ನು ಅರಿತು ಅಪಾಯಕ್ಕೆ ಆಹ್ವಾನ ನೀಡುವ ಈ ಉಗ್ರಾಣ ಪುನರ್ ನಿರ್ಮಿಸಿ ಇಲ್ಲಿ ಉದ್ಯಾನ ಅಥವಾ ಕ್ರೀಡಾಂಗಣ ನಿರ್ಮಿಸಲು ಜನಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟ ಇಲಾಖೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.