ADVERTISEMENT

‘ಉಡಾನ್’: ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿ

ನಾಲ್ಕು ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ: ಡಿ.ವಿ. ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 12:43 IST
Last Updated 5 ಜೂನ್ 2018, 12:43 IST

ಹಾಸನ : ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ‘ಉಡಾನ್‌’ (ಶ್ರೀಸಾಮಾನ್ಯನಿಗೂ ವಿಮಾನ ಯಾನ ಯೋಗ)’ ಯೋಜನೆ ಅಡಿ ಹಾಸನ, ಬೀದರ್ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ವರ್ಷಕ್ಕೆ ಐದು ಏಮ್ಸ್‌, ಐಐಐಟಿ, ಐಐಟಿ ಆರಂಭಿಸುವ ಬಗ್ಗೆ ಕಾರ್ಯಸೂಚಿ ಇದೆ. ಕಳೆದ ಬಾರಿ ಹಿಂದುಳಿದ ಪ್ರದೇಶ ರಾಯಚೂರಿಗೆ ಐಐಟಿ ಸಿಕ್ಕಿತ್ತು. ಯಾವ ಪ್ರದೇಶದಲ್ಲಿ ಐಐಟಿ ಆರಂಭಿಸಬೇಕು ಎನ್ನುವುದನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ಹಣ ನೀಡಿದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ನೋಟ್ ಬ್ಯಾನ್, ಜಿಎಸ್ ಟಿ ಯಂತಹ ಆರ್ಥಿಕ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ಸಾಧನೆಗಳು ಮತ್ತು ಕೆಲಸದ ಬಗ್ಗೆ ಜನರಿಂದ ಮೌಲ್ಯಮಾಪನ ಮಾಡಿಸುವ ಉದ್ದೇಶದಿಂದ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.

ADVERTISEMENT

4 ವರ್ಷದ ಅವಧಿಯಲ್ಲಿ ಶಿಕ್ಷಣ, ಕುಡಿಯುವ ನೀರು, ರಸ್ತೆ, ಆರೋಗ್ಯ, ವಿದ್ಯುತ್, ಉದ್ಯೋಗ ರೈಲ್ವೆ ಯೋಜನೆಗೆ ಆದ್ಯತೆ ನೀಡಲಾಗಿದೆ. ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್ ಮತ್ತು ಪೆಟ್ರೋಲ್ ಒಳಪಟ್ಟರೆ ಬೆಳೆ ಇಳಿಯಲಿದೆ. ಅತಿ ಶೀಘ್ರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದೇಶದಿಂದ ಕಪ್ಪು ಹಣ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗಿದೆ. ಆದರೆ ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ಅಂಕಿ ಅಂಶ ಇಲ್ಲ. ಮಹದಾಯಿ ವಿವಾದ ಬಗೆಹರಿಸಲು ಅಡ್ಡಗಾಲು ಹಾಕಿದ್ದು ಕಾಂಗ್ರೆಸ್‌. ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಸಿದ್ಧತೆ ನಡೆದಿತ್ತು. ಆದರೆ ಅದನ್ನು ರಾಜಕೀಯ ದಾಳವಾಗಿ ಮಾಡಿಕೊಳ್ಳಲಾಯಿತು. ಈಗಲೂ ಪರಿಹಾರಕ್ಕೆ ಹೆಜ್ಜೆ ಇರಿಸಿದ್ದೇವೆ ಎಂದರು.

‘ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹಣ್ಣಾಗಿದೆ. ಯಾವಾಗಾ ಬೇಕಾದರೂ ಬೀಳಬಹುದು. ಹಣ್ಣಿಗೆ ನಿಫಾ ಸೋಂಕು ಅಂಟಿದೆ’ ಎಂದು ವ್ಯಂಗ್ಯವಾಡಿದ ಅವರು, ದೋಸ್ತಿ ಸರ್ಕಾರ ಬಿದ್ದುಹೋದರೆ ಬಿಜೆಪಿ ಸರ್ಕಾರ ರಚಿಸಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ವಿಚಾರ ಸಂಬಂಧ ಅಲ್ಲಿವರೆಗೂ ಸರ್ಕಾರ ಉಳಿದರೆ ತಾನೇ ಆ ಪ್ರಶ್ನೆ ಬರುವುದು’ ಎಂದು ಗೇಲಿ ಮಾಡಿದರು.

‘ಪೇಜಾವರ ಸ್ವಾಮೀಜಿ ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳಿಲ್ಲ. ಬದಲಾಗಿ ಕಪ್ಪುಹಣ ವಾಪಸ್ ತರಲು, ಗಂಗಾ ನೈರ್ಮಲ್ಯೀಕರಣಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ ಅಷ್ಟೇ. ಅದನ್ನು ಸ್ವೀಕರಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಯೋಗಾ ರಮೇಶ್, ಮುಖಂಡರಾದ ನವಿಲೆ ಅಣ್ಣಪ್ಪ, ಶಿವನಂಜೇಗೌಡ, ಹುಲ್ಲಹಳ್ಳಿ ಸುರೇಶ್, ಎಂ.ಕೆ.ಕಮಲ್ ಕುಮಾರ್, ಎಚ್.ಎಂ.ಸುರೇಶ್ ಕುಮಾರ್, ಶೋಭನ್ ಬಾಬು ಇದ್ದರು.

ಶೀಘ್ರ ಸೆರೆಮನೆಗೆ ಮಲ್ಯ
‘ದೇಶದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ವಿದೇಶದಲ್ಲಿ ನೆಲೆಸಿರುವ ಉದ್ಯಮಿಗಳನ್ನು ವಾಪಸ್‌ ಕರೆಸುವ ಕುರಿತು ಪ್ರಯತ್ನ ನಡೆದಿದೆ. ವಿಜಯ್‌ ಮಲ್ಯ ಈಗಾಗಲೇ ದೇಶದ ಜೈಲುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಫೈವ್‌ ಸ್ಟಾರ್‌ ಸೌಲಭ್ಯ ಕೊಡಲು ಆಗುವುದಿಲ್ಲ. ನೀರವ್ ಮೋದಿ ಹಾಗೂ ಮಲ್ಯ ಅವರನ್ನು ಸೆರೆಮನೆಗೆ ಕಳುಹಿಸಲಾಗುವುದು’ ಎಂದು ಸದಾನಂದಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.