ADVERTISEMENT

ಎಡೆಬಿಡದ ಮಳೆ; ಕೃಷಿ ಕೆಲಸ ಬಿರುಸು

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:30 IST
Last Updated 8 ಜೂನ್ 2011, 7:30 IST

ಸಕಲೇಶಪುರ: ಮಲೆನಾಡಿನಲ್ಲಿ ಐದು ದಿನಗಳಿಂದ `ಮಂಗಾರು ಮಳೆ~ ಬಿಡುವಿಲ್ಲದೆ ಸುರಿಯುತ್ತಿದ್ದು, ಕಾಫಿ ಬೆಳೆ ಹೊರತುಪಡಿಸಿ, ಬತ್ತ ಬೆಳೆಯುವ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.

ಗುರುವಾರ ಮುಂಜಾನೆಯಿಂದ ಸೋನೆಯಂತೆ ಶುರುವಾದ ಮುಂಗಾರು ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾನುಬಾಳು, ಹೆತ್ತೂರು, ಕಸಬಾ  ಹಾಗೂ ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಬಿಡುವಿಲ್ಲದೇ ಸುರಿದಿದೆ.

ಪಶ್ಚಿಮಘಟ್ಟದ ಅಂಚಿನಲ್ಲಿರುವ ಅಗನಿ, ಕಾಡಮನೆ, ಕಾಗನಹರೆ, ಬಿಸಿಲೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದಾಗಿ ತಾಲ್ಲೂಕು ಆಡಳಿತ ತಿಳಿಸಿದೆ.

ಕೃಷಿ ಚಟುವಟಿಕೆ ಚುರುಕು: ಪ್ರಸಕ್ತ ಮುಂಗಾರು ಹಂಗಾವಿನಲ್ಲಿ ತಾಲ್ಲೂಕಿನಾದ್ಯಂತ 9500 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬೆಳೆಯುವ ಗುರಿ ಹೊಂದಲಾಗಿದೆ. ರೈತರು ಗದ್ದೆ ಉಳುಮೆ, ಬಿತ್ತನೆ ಬೀಜ ಖರೀದಿ, ಸಸಿ ಮಡಿಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೃಷಿ ಇಲಾಖೆಯಿಂದ ಈ ಬಾರಿ 1925 ಕ್ವಿಂಟಾಲ್ ಬಿತ್ತನ ಬೀಜಗಳನ್ನು ರೈತರಿಗೆ ವಿತರಣೆ ಮಾಡುವ ಗುರಿ ಇಟ್ಟುಕೊಂಡಿದ್ದು, ಇಲಾಖೆಯ ಗೋದಾಮಿನಲ್ಲಿ  750 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ಈಗಾಗಾಲೇ 1120 ರೈತರಿಗೆ 530 ಕ್ವಿಂಟಾಲ್ ವಿತರಣೆ ಮಾಡಲಾಗಿದೆ ಎಂದ ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೀಶ್ `ಪ್ರಜಾವಾಣಿ~ಗೆ ಹೇಳಿದರು.

ತಾಲ್ಲೂಕಿನಲ್ಲಿ ತುಂಗಾ ಹಾಗೂ ಇಂಟಾನ್ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಬೇಡಿಕೆ ಇರುವಷ್ಟು ಈ ತಳಿಗಳ ಬಿತ್ತನೆ ಬೀಜವು ಕೃಷಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದಿಂದ ತಾಲ್ಲೂಕಿಗೆ ಪೂರೈಕೆ ಆಗುತ್ತಿಲ್ಲ. ಇಲಾಖೆ ಅಧಿಕಾರಿಗಳ ಶ್ರಮದಿಂದ 318 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ.

ಮಲೆನಾಡಿನ ರೈತರ ಬೇಡಿಕೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ಮುಂದಿನ ವರ್ಷವಾದರೂ ರೈತರ ಬೇಡಿಕೆಗೆ ಅನುಗುಣವಾಗಿ ತುಂಗಾ ಹಾಗೂ ಇಂಟಾನ್ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಅಗತ್ಯವಿದೆ. ಭತ್ತಕ್ಕೆ ಪ್ರಮುಖವಾಗಿ ಬಳಸುವ ಸುಫಲಾ 15-15-15 ಗೊಬ್ಬರವನ್ನು ತಾಲ್ಲೂಕಿಗೆ 2500  ಟನ್ ಪೂರೈಸುವಂತೆ ಕೃಷಿ ಇಲಾ ಖೆಯಿಂದ ಈಗಾಗಲೆ ಬೇಡಿಕೆ ಸಲ್ಲಿಸಿದ್ದು, ಜಿಲ್ಲಾಡಳಿತ ತುರ್ತಾಗಿ ಗೊಬ್ಬರ ವಿತರಣೆ ಮಾಡುವ ಅಗತ್ಯವಿದೆ.

ರೈತರಿಗೆ ಸಲಹೆ: ಮನೆಯಲ್ಲಿ ಬೆಳೆದ ಭತ್ತದ ಬಿತ್ತನೆ ಬೀಜ ಉಪಯೋಗಿಸುವಾಗ, ಉಪ್ಪು ನೀರಿನ ದ್ರಾವಣದೊಂದಿಗೆ ಉಪಚರಿಸಿ, ಕಾರ್ಬೈನ್ ಡೈಜಿನ್ ಪ್ರತಿ ಕೆ.ಜಿಗೆ 4 ಗ್ರಾಂನಷ್ಟು ಮಿಶ್ರಣ ಮಾಡಿ ಬಿತ್ತನೆ ಮಾಡಿದ್ದಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಸಲಹೆ ನೀಡುತ್ತಾರೆ.

ಗೊಬ್ಬರ ಮಾರಾಟದ ಅಂಗಡಿ ಮಾಲಕರು ಚೀಲಗಳಲ್ಲಿ ಮುದ್ರಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಹಣ ಪಡೆಯುವುದು ಕಂಡು ಬಂದಲ್ಲಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

ಕಾಫಿ ಬೆಳೆ: ನಿರಂತರ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಚಿಗುರು ತೆಗೆಯುವುದು ಹಾಗೂ ಗೊಬ್ಬರ ಹಾಕುವ ಕೆಲಸಕ್ಕೆ ಅಡ್ಡಿಯುಂಟಾಗಿದೆ. ಮಳೆಯಿಂದಾಗಿ ತೋಟ ಕಾರ್ಮಿಕರು ಮನೆಯಿಂದ ಹೊರಗೆ ಬಾರದೆ ಇರುವುದರಿಂದ ತೋಟದ ಕೆಲಸ ಕುಂಠಿತಗೊಂಡಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಾರೆ.

ಮಳೆಯಿಂದ ತೊಂದರೆ
ತಾಲ್ಲೂಕಿನಲ್ಲಿ ವಾರದಿಂದ ನಿರಂತರ ವಾಗಿ ಮಂಗಾರು ಸುರಿಯುತ್ತಿ ರುವು ದರಿಂದ ಕೆಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ, ಸಂಚಾರಕ್ಕೆ ಅಡಚಣೆ, ನಿರಂತರ ವಿದ್ಯುತ್ ಕಡಿತ ಮೊದಲಾದ ಸಮಸ್ಯೆಗಳು ಉಂಟಾಗಿವೆ.

ಹಾನುಬಾಳು ಮೂಡಿಗೆರೆ ಮುಖ್ಯ ರಸ್ತೆಯ ಹುರುಡಿ ಬಳಿ ರಸ್ತೆಗೆ ಭಾನು ವಾರ ಮರವೊಂದು ಉರುಳಿ ಬಿದ್ದು, ಲಘು ವಾಹನಗಳನ್ನು ಹೊರತು ಪಡಿಸಿ ಬಸ್ಸುಗಳು ಹಾಗೂ ಲಾರಿಗಳ ಓಡಾಟಕ್ಕೆ ಕೆಲವು ಗಂಟೆ ಕಾಲ ಅಡ್ಡಿ ಯುಂಟಾಗಿತ್ತು. ಕಾಡಮನೆ ರಸ್ತೆ ಯಲ್ಲಿಯೂ ಸಹ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತಾದರೂ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.

ಮಾರನಹಳ್ಳಿ, ಬೆಳಗೋಡು, ಬಾಗೆ, ಸಿದ್ದಾಪುರ, ಆಚಂಗಿ, ಕ್ಯಾಮನಹಳ್ಳಿ, ದೇವಲಕೆರೆ, ಜಪಾವತಿ, ಚಿಮ್ಮೀಕೋಲು ಸೇರಿದಂತೆ ತಾಲ್ಲೂಕಿನಲ್ಲಿ  30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗು ರುಳಿವೆ ಎಂದು ಸಹಾಯಕ ಎಂಜಿನಿ ಯರ್ ಚಲಪತಿ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.