ADVERTISEMENT

`ಎಫ್‌ಡಿಐನಿಂದ ಅನಾನುಕೂಲ: ಲೋಕಸಭೆಯಲ್ಲಿ ಚರ್ಚೆ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:03 IST
Last Updated 17 ಡಿಸೆಂಬರ್ 2012, 6:03 IST

ಹಾಸನ: `ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಸ್ಥಳಿಯ ವರ್ತಕರಿಗೆ ಆಗಬಹುದಾದ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಮುಂದಿನ ದಿನಗಳಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುವುದು' ಎಂದು ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡ ನುಡಿದರು.

ಚಿನ್ನ-ಬೆಳ್ಳಿ ವರ್ತಕರ ಸಂಘದ ಜಿಲ್ಲಾ ಘಟಕದವರು ಹಾಸನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಚಿನ್ನ-ಬೆಳ್ಳಿ ವರ್ತಕರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು. ಚಿನ್ನ-ಬೆಳ್ಳಿ ಕೆಲಸಗಾರರಿಗೆ ತರಬೇತಿ ನೀಡಲು ಜ್ಯೂಯಲರಿ ಪಾರ್ಕ್ ನಿರ್ಮಾಣ ಸೇರಿದಂತೆ ವರ್ತಕರಿಗೆ ಅನುಕೂಲವಾಗುವಂತಹ ವ್ಯವಸ್ಥೆ ನೀಡಬೇಕಾದ ಅವಶ್ಯಕತೆ ಇದೆ. ಸರ್ಕಾರಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು' ಎಂದರು.
ಚಿನ್ನ-ಬೆಳ್ಳಿ ವರ್ತಕರ ಸಂಘದವರು ಸಿದ್ಧಪಡಿಸಿರುವ ಸ್ಮರಣಸಂಚಿಕೆಯನ್ನೂ ದೇವೇಗೌಡರು ಬಿಡುಗಡೆ ಮಾಡಿದರು.

ಜೆ.ಡಿ.ಎಲ್.ಪಿ. ನಾಯಕ ಎಚ್.ಡಿ. ರೇವಣ್ಣ ಮಾತನಾಡಿ `ಚಿನ್ನ-ಬೆಳ್ಳಿ ವರ್ತಕರು ಇಂದು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದು, ವರ್ತಕರಿಗೆ ಎದುರಾಗಿರುವ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು  ಎಂದರಲ್ಲದೆ ರಾಜ್ಯ ಸರ್ಕಾರ ಕೆಲಸಗಾರರನ್ನು ಸ್ವಾವಲಂಬಿಗಳಾಗಿಸಲು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು' ಎಂದರು.

ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಎಚ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಮಾಜಿ ಶಾಸಕ ಕರೀಗೌಡ, ಮುಖಂಡ ಕೆ.ಎಂ.ರಾಜೇಗೌಡ, ಚಿನ್ನ-ಬೆಳ್ಳಿ ಸಂಘದ ರಾಜ್ಯ ಕೋ-ಆರ್ಡಿನೇಷನ್ ಕಮಿಟಿಯ ಉಪಾಧ್ಯಕ್ಷ ಜಯ   ಚಾರ್ಯ್ ಹಾಗೂ ಜ್ಯುವೆಲರ್ಸ್‌ ಅಧ್ಯಕ್ಷ ಬಿ. ರಾಮಾಚಾರಿ, ಸಂಘದ ಜಿಲ್ಲಾಧ್ಯಕ್ಷ ಆರ್. ರಾಜಗೋಪಾಲ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.