ADVERTISEMENT

ಐತಿಹಾಸಿಕ ಗ್ರಾಮ: ಕುಡಿಯುವ ನೀರಿಗೆ ಕ್ಷಾಮ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:45 IST
Last Updated 17 ಅಕ್ಟೋಬರ್ 2012, 8:45 IST

ಬೇಲೂರು: ಹಾಸನ - ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದ ಕುಗ್ರಾಮ ಹಲ್ಮಿಡಿ. ಕನ್ನಡ ಭಾಷೆಯ ಪ್ರಾಚೀನತೆಗೆ ಸಾಕ್ಷಿಯಾ ಗಿರುವ ಶಾಸನ ದೊರೆತ ಊರು ಹಲ್ಮಿಡಿ ಈಗ ಯಾರಿಗೂ ಬೇಡವಾದ ಗ್ರಾಮ.
ಗ್ರಾಮದಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದ ಬೇಕಾದ ಹಲ್ಮಿಡಿ ಗ್ರಾಮ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕೆರೆಯ ಬಳಿ ದನ ಕಟ್ಟಲು, ಬಟ್ಟೆ ಒಗೆಯಲು ಬಳಕೆಯಾಗುತ್ತಿದ್ದ ಒಂದು ಪುಟ್ಟ ಕಲ್ಲು ಕನ್ನಡ ಭಾಷೆಗೆ ಮಹತ್ವದ ದಾಖಲೆ ಯಾಗುತ್ತದೆ. ಕನ್ನಡಕ್ಕೆ ಪ್ರಾಚೀನತೆಯ ಮೆರಗು ನೀಡುತ್ತದೆ ಎಂಬುದು 1936ರ ವರೆಗೂ ಯಾರಿಗೂ ತಿಳಿದಿರಲಿಲ್ಲ.
 
ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರಾಗಿದ್ದ ಶಾಸನ ತಜ್ಞ ಎಂ.ಎಚ್. ಕೃಷ್ಣ ಅವರು ಶಾಸನಗಳ ಅಧ್ಯಯನ ಮಾಡುತ್ತಾ ಹಲ್ಮಿಡಿಗೆ ಬಂದು ಕೆರೆಯ ಬಳಿ ಬಿದ್ದಿದ್ದ ಈ ಶಾಸನ ಪರಿಶೀಲಿಸಿ ದಾಗ ಇದು ಕನ್ನಡದ ಪ್ರಥಮ ಶಿಲಾ ಶಾಸನ ಎಂಬುದು ಅವರ ಅರಿವಿಗೆ ಬಂತು.
 
ಕದಂಬರ ಅರಸ ಕಾಕುತ್ಸವರ್ಮನ ಆಡಳಿತ ಕಾಲದಲ್ಲಿ ಕ್ರಿ.ಶ. 450ರ ಸುಮಾರಿನಲ್ಲಿ ವಿಜ ಅರಸ ಎಂಬುವನಿಗೆ ದಾನ ಕೊಟ್ಟ ಬಗ್ಗೆ ಉಲ್ಲೇಖ ಗೊಂಡಿದೆ. ಈ ಶಾಸನ ಕನ್ನಡದ ಪುರಾತನ ಲಿಪಿಯಾದ ದಾಕ್ಷಿಣಾತ್ಯ ಬ್ರಾಹ್ಮಿಲಿಪಿಯಲ್ಲಿ ಕೆತ್ತಲ್ಪಟ್ಟಿದೆ.

ಪ್ರಸ್ತುತ ಈ ಶಾಸನ ಬೆಂಗಳೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ದಲ್ಲಿ ಸಂರಕ್ಷಿಸಲ್ಪಟ್ಟಿದೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಕೆಲವು ವರ್ಷಗಳ ಹಿಂದೆ ಶಾಸನದ ಪ್ರತಿಕೃತಿ ಮಂಟಪ ನಿರ್ಮಿಸಿರುವುದು ಒಂದು ಸಮಾಧಾನಕರ ಅಂಶವಾಗಿದೆ.

 ಕನ್ನಡ ಭಾಷೆಯ ತವರೂರು ಎನಿಸಿದ ಈ ಹಲ್ಮಿಡಿ ಆಳುವವರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬೇರೆ ಯಾವುದೇ ರಾಜ್ಯದಲ್ಲಾದರೂ ಆ ಭಾಷೆಗೆ ಮಹತ್ವ ನೀಡುವ ಶಾಸನ ದೊರಕಿದ್ದರೆ, ಆ ಊರು ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿತ್ತು.

ಆದರೆ ಕನ್ನಡದ ಪ್ರಾಚೀನತೆಗೆ ಸಾಕ್ಷ್ಯ ಒದಗಿಸಿದ ಹಲ್ಮಿಡಿ ಇಂದಿಗೂ ಕುಗ್ರಾಮವಾಗಿಯೇ ಇದೆ. ಸುಮಾರು 350 ಕುಟುಂಬಗಳು, 3 ಸಾವಿರ ಜನಸಂಖ್ಯೆಯ ಈ ಊರಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಓವರ್ ಹೆಡ್ ಟ್ಯಾಂಕ್ ಇದ್ದರೂ ಕೊಳವೆ ಬಾವಿಗಳು ಬತ್ತಿ ಹೋಗಿರುವುದರಿಂದ ನೀರು ದೊರಕುತ್ತಿಲ್ಲ.

ಕೊಳವೆ ಬಾವಿಯ ಮೋಟಾರ್ ಸುಟ್ಟು ಹೋಗಿದ್ದೆ. ಇರುವ ಎರಡು ಕೊಳವೆ ಬಾವಿಗಳು ತುಕ್ಕು ಹಿಡಿದು ಹಾಳಾಗಿವೆ. 1 ಕಿ.ಮೀ. ದೂರದ ಹೊಸಮೇನಹಳ್ಳಿಯಿಂದ ನೀರು ತರುವ ದುಃಸ್ಥಿತಿ ಗ್ರಾಮಸ್ಥರದ್ದಾಗಿದೆ. ಸಮೀಪದಲ್ಲಿ ಹರಿಯುವ ಯಗಚಿ ನದಿಯ ಮೂಲಕ ಗ್ರಾಮಕ್ಕೆ ನಿರಂತರ ನೀರು ಹರಿಸಬೇಕೆಂಬ ಬೇಡಿಕೆ ಈಡೇರಿಲ್ಲ.

ಬೇಲೂರು- ಚಿಕ್ಕಮಗಳೂರು ರಸ್ತೆಯಿಂದ ಹಲ್ಮಿಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿ.ಮೀ. ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಗ್ರಾಮದೊಳಗಿನ ರಸ್ತೆಗಳೂ ಕೆಟ್ಟಿವೆ. ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆಯಿದೆ.

ಮುಳುಗಡೆಯಾದ ಬೆಣ್ಣೂರಿನ ಪ್ರೌಢಶಾಲೆ ಯನ್ನು ಹಲ್ಮಿಡಿಗೆ ವರ್ಗಾಯಿಸಲಾಗಿದೆ. ಬೆಣ್ಣೂರಿನಲ್ಲಿರುವ ವ್ಯವಸಾಯ ಸಹಕಾರ ಸಂಘವನ್ನು ಹಲ್ಮಿಡಿಗೆ ವರ್ಗಾಯಿಸಬೇಕೆಂಬ ಬೇಡಿಕೆ ಈಡೇರಿಲ್ಲ.

ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಈ ಗ್ರಾಮಕ್ಕಿದೆ. ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ದನ ಕರುಗಳಿದ್ದು, ಪಶು ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂಬುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುಸಿದ್ದೇಗೌಡರ ಆಗ್ರಹ.

ಹಲ್ಮಿಡಿ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲು ಸರ್ಕಾರ ಮುಂದಾಗಿದೆ. ಸುವರ್ಣ ಗ್ರಾಮ ಯೋಜನೆಯಡಿ ಈ ಹಲ್ಮಿಡಿಯನ್ನು ಸೇರ್ಪಡೆ ಮಾಡಲಾಗಿದೆಯಾದರೂ ಇದು ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರಬೇಕಾಗಿದೆ.

ಕನ್ನಡದ ಮೊದಲ ಶಿಲಾಶಾಸನ ಲಭಿಸಿರುವ ಹಲ್ಮಿಡಿ ಗ್ರಾಮವನ್ನು ಸರ್ಕಾರ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾಗಿದೆ. ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಡಿಸಿ ಹಲವು ಸೌಲಭ್ಯ ಕಲ್ಪಿಸಬೇಕಿದೆ.

ಜತೆಗೆ ಸಾಹಿತ್ಯಾ ಸಕ್ತರು, ಸಂಶೋಧಕರಿಗೆ ಕನ್ನಡ ಭಾಷೆ, ಲಿಪಿಯ ಬಗ್ಗೆ ಸಂಶೋಧನೆ ನಡೆಸಲು ವಿಪುಲ ಅವಕಾಶಗಳಿದ್ದು, ಅದಕ್ಕೂ ಸರ್ಕಾರ ಹಾಗೂ ಜಿಲ್ಲಾಡಳಿತ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.