ADVERTISEMENT

ಒಳ ಚರಂಡಿ ದುರಸ್ತಿಗೆ ರೂ. 80 ಕೋಟಿ: ಶಾಸಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 8:15 IST
Last Updated 6 ಮಾರ್ಚ್ 2012, 8:15 IST

ಅರಸೀಕೆರೆ: ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ಪರಿಹರಿಸುವ ಉದ್ದೇಶ ದಿಂದ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಲು 121ಕೊಟಿ ರೂಪಾಯಿ ವೆಚ್ಚದಲ್ಲಿ ಚನ್ನರಾಯ ಪಟ್ಟಣ ತಾಲ್ಲೂಕಿನ ಘನ್ನಿಗಡದಿಂದ ಹೇಮಾವತಿ ನದಿ ಮೂಲದ ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಭಾನುವಾರ ತಿಳಿಸಿದರು.

ಶಿವಮೊಗ್ಗಾ- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಲ್ಲಿ ವಿದ್ಯುತ್ ಕಂಬಗಳ ಅಳವಡಿಕೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆಯ ಮಧ್ಯೆದಲ್ಲಿ ವಿದ್ಯುತ್ ದೀಪಗಳ ಅಳವಡಿಕೆಯಿಂದ ರಾತ್ರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ವಾಗುತ್ತದೆ ಎಂದರು.

ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ರೂಪುಗೊಂಡಿರುವ ಒಳ ಚರಂಡಿ ವ್ಯವಸ್ಥೆ ಈಗ ಸಂಪೂರ್ಣ ಹಾಳಾಗಿ ಹೋಗಿದ್ದು, ಒಳ ಚರಂಡಿ ವ್ಯವಸ್ಥೆಗೆ ಇತಿಶ್ರೀ ಹಾಡಲು ಪೌರಾ ಡಳಿತ ಸಚಿವ ಸುರೇಶ್‌ಕುಮಾರ್ ಹಸಿರು ನಿಶಾನೆ ತೋರಿ ಸರ್ಕಾರ 80 ಕೊಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಯೋಜನೆ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈ ಕಾಮಗಾರಿ ಭೂಮಿ ಪೂಜೆಗೆ ಸಚಿವರು ಶೀಘ್ರದಲ್ಲಿಯೇ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು

ಮುಖ್ಯ ಮಂತ್ರಿಗಳ ಸಣ್ಣ ಮದ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ ಯೋಜನೆಯಡಿ 1.06 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಹೊರಭಾಗ ದಲ್ಲಿರುವ ಕಂತೇನಹಳ್ಳಿ ಕೆರೆ ಬಳಿಯಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಗೇಟ್‌ವರೆಗೆ ಹಾಗೂ ಅರಸೀಕೆರೆ-ಹಾಸನ ರಸ್ತೆಯ ವಿಭಜಕ ಮಧ್ಯದಲ್ಲಿ ಸುಮಾರು 800 ಮೀಟರ್‌ನಲ್ಲಿ 100 ವಿದ್ಯುತ್ ದೀಪಗಳ ಕಂಬಗಳನ್ನು ಅಳವಡಿಸುವ ಕಾಮಗಾರಿಯನ್ನು ಪುರಸಭೆ ಆಡಳಿತ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷ ಎಂ. ಶಮೀವುಲ್ಲಾ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಬೀರೇಗೌಡ, ಸದಸ್ಯರಾದ ಎನ್.ಎಸ್. ಸಿದ್ದರಾಮಶೆಟ್ಟಿ, ಎನ್.ಡಿ ಪ್ರಸಾದ್, ಬಿ.ಎನ್. ವಿದ್ಯಾಧರ್,ಶಾಂತ್‌ರಾಜ್ ಜಿ.ಟಿ.ಗಣೇಶ್, ಬುದ್ದಿವಂತ ರಮೇಶ್, ರೇವಣ್ಣ, ಕೆ.ಎಸ್. ಸಿದ್ದಮ್ಮ, ಗಂಗಮ್ಮ, ಪುರಸಭಾ ಮುಖ್ಯಾಧಿಕಾರಿ ರಂಗೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.