ADVERTISEMENT

ಕರ್ತವ್ಯಲೋಪ: 3 ಶಿಕ್ಷಕರ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 6:16 IST
Last Updated 13 ಜೂನ್ 2013, 6:16 IST

ಚನ್ನರಾಯಪಟ್ಟಣ: ಕರ್ತವ್ಯಲೋಪ ಎಸಗಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ `ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ'ಯಲ್ಲಿ ಇಲಾಖೆ ಬಗ್ಗೆ ಮಾಹಿತಿ ನೀಡಿದ ಅವರು, ಅನಧಿಕೃತ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಾವಿನಹಳ್ಳಿ ಹಾಗೂ ಘನ್ನಿ ಅಗ್ರಹಾರ ಗ್ರಾಮದ ಶಾಲಾ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

ವಿದ್ಯಾರ್ಥಿಗಳ ಕೊರತೆಯಿಂದ ಹಿಂದೆ ಮುಚ್ಚಲಾಗಿದ್ದ ನಾಲ್ಕು ಸರ್ಕಾರಿ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆರಂಭಿಸಲಾಗಿದೆ. ಕೆ. ಹೊಸೂರು, ನರಿಹಳ್ಳಿ, ಡಿ. ಹೊನ್ನೇನಹಳ್ಳಿ ಹಾಗೂ ದೊಡ್ಡೇರಿ ಕಾವಲು ಗ್ರಾಮದ ಶಾಲೆಗಳು ಆರಂಭ ವಾಗಿವೆ. ಸದ್ಯದಲ್ಲಿ ಮೂರು ಶಾಲೆ ಆರಂಭಿಸಲಾಗುವುದು ಎಂದರು.

ಸದಸ್ಯ ಎಚ್.ಎಸ್. ರವಿಕುಮಾರ್ ಮಾತನಾಡಿ, ಮಕ್ಕಳ ಅಗತ್ಯಕ್ಕಾಗಿ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಮತ್ತೆ ಶಾಲೆ ಮುಚ್ಚವ ಸ್ಥಿತಿ ಉಂಟಾಗಬಹುದು. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 25ರಷ್ಟು ಸೀಟುಗಳನ್ನು ಖಾಸಗಿ ಶಾಲೆಯಲ್ಲಿ ಮೀಸಲಿಡಬೇಕು. ಕಾಯ್ದೆಯನ್ನು ಖಾಸಗಿ ಶಾಲೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ನಿಯಮ ಉಲ್ಲಂಘಿಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಪಿ.ಕೆ. ಮಂಜೇಗೌಡ ಒತ್ತಾಯಿಸಿದರು.

ಈ ಬಗ್ಗೆ ಮೌಖಿಕವಾಗಿ ದೂರು ಬರುತ್ತದೆ. ಲಿಖಿತವಾಗಿ ದೂರು ನೀಡಲು ಯಾರೂ ಮುಂದೆ ಬರುವುದಿಲ್ಲ. ಸದ್ಯದಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್ ಮಾತನಾಡಿ, ಧಮ್ಮನಿಂಗಲ ಗ್ರಾಮದ ಪ್ರೌಢಶಾಲೆ ಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಆದರೆ, ಇಂಗ್ಲಿಷ್ ಶಿಕ್ಷಕರ ಹುದ್ದೆ ಖಾಲಿ ಇದೆ. ಇಂಗ್ಲಿಷ್ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾಮಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಪೋಷಕರಿಗೆ ಮನವರಿಕೆ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದು ವಿಪರ್ಯಾಸ ಎಂದು ಸದಸ್ಯ ಕೆ,ಎನ್. ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಪಿಎಲ್ ಕಾರ್ಡ್ ವಿತರಿಸುವುದು ಯಾವಾಗ? ನ್ಯಾಯಬೆಲೆ ಅಂಗಡಿಗಳ ಮೇಲೆ ಹಿಡಿತ ಸಾಧಿಸಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಾಧ್ಯ ವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಪಿ.ಕೆ. ಮಂಜೇಗೌಡ, ಕಂಪ್ಯೂಟರ್ ಆಪರೇಟರ್‌ಗಳ ಕಾರುಬಾರು ಜಾಸ್ತಿ ಯಾಗಿದೆ. ಪೋಟೊ ತೆಗೆಸಲು ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯರಾದ ಸವಿತಾ ಮತ್ತು ಎಚ್.ಎಸ್. ರವಿಕುಮಾರ್, ಪೋಟೊ ತೆಗೆಸಿಕೊ ಳ್ಳಲು ಟೋಕನ್ ಪಡೆದು ಅನೇಕ ದಿನಗಳ ಕಾಲ ಕೆಲಸ ಕಾರ್ಯ ಬಿಟ್ಟು ಹಳ್ಳಿಗಳ ಜನತೆ ಕಾಯುವಂತಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬಿಪಿಎಲ್/ಎಪಿಎಲ್‌ಕಾರ್ಡ್‌ದಾರರನ್ನು ಗುರುತಿಸಲಿದ್ದಾರೆ ಎಂದು ಆಹಾರ ನಿರೀಕ್ಷಕರು ಉತ್ತರಿಸಿ ದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಒಬ್ಬ ಫಲಾನುಭವಿ ಅನೇಕ ಸವಲತ್ತುಗಳನ್ನು ಪಡೆಯು ತ್ತಾರೆ. ಇಂಥವರು ಪರಿಶಿಷ್ಟಜಾತಿ, ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಮ್ಮ ವಿರುದ್ಧ ಆರೋಪ ಮಾಡುತ್ತಾರೆ.

ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಸಭೆಗಳಲ್ಲಿ ಅವಹೇಳನ ಮಾಡುತ್ತಾರೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಶಾಂತಕುಮಾರ್ ಸಭೆಯ ಗಮನಕ್ಕೆ ತಂದರು.
ತಾ.ಪಂ.ಕಾರ್ಯ ನಿರ್ವಹಣಾಧಿ ಕಾರಿ ಕೆ.ಬಿ. ನಿಂಗರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.