ADVERTISEMENT

ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅಪಮಾನ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:15 IST
Last Updated 28 ಜನವರಿ 2012, 10:15 IST

ಹೊಳೆನರಸೀಪುರ: ಕಾಂಗ್ರೆಸ್ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯಿಂದ ದೂರವಿಡುವ ಸಲುವಾಗಿ ಅವರಿಗೆ ಕ್ಷೇತ್ರವೇ ಇಲ್ಲದಂತೆ ಮಾಡಿದ್ದರು. ಬ್ರಿಟೀಷರು ಅಂಬೇಡ್ಕರ್ ಅವರಿಗೆ ದೀನ ದಲಿತರ ಬಗ್ಗೆ ಇದ್ದ ಕಾಳಜಿಯಿಂದ ಒಂದು ಕ್ಷೇತ್ರಕ್ಕೆ ರಾಜಿನಾಮೆ ಕೊಡಿಸಿ ಅಲ್ಲಿ ಗೆಲ್ಲಿಸಿ ಅವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು ಎಂದು ಮಾಜಿ ಸಚಿವ ಬಿ. ಸೋಮಶೇಖರ್ ನುಡಿದರು.
ಗುರುವಾರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಸಂಕಲ್ಪ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ದಲಿತರು ಒಗ್ಗಟ್ಟಾಗಿ ತಮ್ಮನ್ನು ತಾವೇ ಉದ್ದಾರಮಾಡಿಕೊಳ್ಳಬೇಕು. ರಾಜ್ಯದಲ್ಲಿ ಶೇ 11 ರಷ್ಟಿರುವ ಒಕ್ಕಲಿಗರು, ಶೇ 18 ರಷ್ಟಿರುವ ಲಿಂಗಾ ಯಿತರು ತಮ್ಮ ಜನಾಂಗದವರನ್ನು ಮುಖ್ಯಮಂತ್ರಿ ಮಾಡಿಕೊಂಡಿದ್ದಾರೆ. ಆದರೆ ದಲಿತರು ಶೇ 35 ರಷ್ಟಿದ್ದರೂ ನಮ್ಮವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಕಾರಣ ದಲಿತರು ಒಗ್ಗ ಟ್ಟಾಗಿಲ್ಲ. ನಮಗೆ ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ ದೊರೆತಿಲ್ಲ. ಇದು ಸದ್ಯಕ್ಕೆ ಸಾಧ್ಯವೂ ಇಲ್ಲ.

ಆದರೆ ದಲಿತರೆಲ್ಲಾ ಒಗ್ಗಟಾಗಿದ್ದರೆ ರಾಜಕೀಯ ಸಮಾನತೆಯನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಸರ್ವ ಜನ ಸಮಾಜದ ಅಧ್ಯಕ್ಷ ಗೋಪಾಲ್ ಮಾತನಾಡಿದರು. ರಾಜ್ಯ ದಲಿತ ಸಂಘರ್ಷ ಸಮಿತಿಯ ಎನ್. ಮಹೇಶ್ ಮಾತನಾಡಿದರು.

ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಂ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು
ಲೇಖಕ ಕುಮಾರಯ್ಯ, ಚಿನ್ನಸ್ವಾಮಿ, ಶಿವರಾಂ, ಜಗದೀಶ್ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.