ADVERTISEMENT

ಕಾಂಗ್ರೆಸ್ ಸಭೆಯಲ್ಲಿ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 4:00 IST
Last Updated 25 ಜನವರಿ 2012, 4:00 IST
ಕಾಂಗ್ರೆಸ್ ಸಭೆಯಲ್ಲಿ ಮಾರಾಮಾರಿ
ಕಾಂಗ್ರೆಸ್ ಸಭೆಯಲ್ಲಿ ಮಾರಾಮಾರಿ   

ಬೇಲೂರು:ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ  ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿ ನಡೆಸಿದರಲ್ಲದೆ, ಕುರ್ಚಿಯನ್ನು ಧ್ವಂಸಗೊಳಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಎ.ಎನ್.ಮಾಧವೇಗೌಡ ಅವರನ್ನು ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಒಂದು ವರ್ಷದ ಬಳಿಕ ತಾ.ಪಂ. ಮಾಜಿ ಅಧ್ಯಕ್ಷ ವೈ.ಟಿ.ದಾಮೋದರ್ ಅವರನ್ನು ಆಯ್ಕೆ ಮಾಡುವುದಾಗಿ ಶಾಸಕ ವೈ.ಎನ್.ರುದ್ರೇಶ್‌ಗೌಡ ಮಾತು ಕೊಟ್ಟಿದ್ದರು. ಆದರೆ ಈಗ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ, ಶಾಸಕ ವೈ.ಎನ್.ರುದ್ರೇಶ್‌ಗೌಡ, ಮಾಜಿ ಶಾಸಕ ಎಸ್. ಎಂ.ಆನಂದ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಎ.ಎನ್. ಮಾಧವೇಗೌಡ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಂಘಟನೆಗೆ ತೀವ್ರ ಹಿನ್ನೆಡೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನೇ ನಡೆಸಿಲ್ಲ. ಶಾಸಕ ರುದ್ರೇಶ್‌ಗೌಡ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಗುತ್ತಿಗೆ ನೀಡುವಲ್ಲೂ ತಾರತಮ್ಯ ನಡೆಸುತ್ತಿದ್ದಾರೆ ಎಂದು ಬಹುತೇಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ವೇದಿಕೆಯ ಮುಂಭಾಗಕ್ಕೆ ಬಂದು ಮಾರಾಮಾರಿ ನಡೆಸಿದರು. 

 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ, ಮಾಜಿ ಶಾಸಕ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎಂ.ಆನಂದ್ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು. ಶಾಸಕ ರುದ್ರೇಶ್‌ಗೌಡ ಒಂದು ತಿಂಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ ನಂತರ ಸಭೆ ಸುಗಮವಾಗಿ ನಡೆಯಿತು. ಸಭೆಯ ವರದಿ ಮಾಡಲು ಹೋದ ಪತ್ರಕರ್ತರನ್ನು ಕೆಲ ಮುಖಂಡರು ಬಲವಂತವಾಗಿ ಹೊರ ಕಳುಹಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಬೇಲೂರು ತಾಲ್ಲೂಕು ವೀಕ್ಷಕ ವೈ.ಪಿ.ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎನ್.ಮಾಧವೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್‌ಗೌಡ, ಜಿಲ್ಲಾ ಕಾರ್ಯದರ್ಶಿ ವೈ.ಟಿ.ದಾಮೋದರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿರಟೆಮನೆ ಸುರೇಶ್, ಮಾಜಿ ಅಧ್ಯಕ್ಷ ಕೆ.ಪಿ.ಶೈಲೇಶ್, ಕೆ.ಪಿ.ಸಿ.ಸಿ. ಸದಸ್ಯ ಪಿ.ಎಫ್.ಸಾಲ್ಡಾನ ಸಭೆಯಲ್ಲಿ ಭಾಗವಹಿಸಿದ್ದರು.

ವೈ.ಟಿ.ದಾಮೋದರ್ ಆಯ್ಕೆ: ಶಾಸಕ
 `ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎನ್. ಮಾಧವೇಗೌಡ ಅವರನ್ನು ಬದಲಾಯಿಸಿ ಒಂದು ತಿಂಗಳಲ್ಲಿ ವೈ.ಟಿ.ದಾಮೋದರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು~ ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ತಿಳಿಸಿದರು.

ತಾಲ್ಲೂಕು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ, ರಾಜ್ಯ ಕಾರ್ಯದರ್ಶಿ ಎಸ್.ಎಂ.ಆನಂದ್ ಅವರ ಸಮ್ಮುಖದಲ್ಲಿ ಮಂಗಳವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಮಾತನಾಡಿ ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಯಾವುದೇ ರೀತಿಯ ಗದ್ದಲ ನಡೆದಿಲ್ಲ. ಕಾರ್ಯಕರ್ತರಿಗೆ ಗುತ್ತಿಗೆ ನೀಡುತ್ತಿರುವ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು. ಕುರ್ಚಿಯನ್ನು ಯಾರೂ ಒಡೆದಿಲ್ಲ. ಅದು ಮೇಲಿನಿಂದ ಬಿದ್ದು ಒಡೆದು ಹೋಯಿತು.
 
ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಂಘಟನೆಯ ಬಗ್ಗೆ ಚರ್ಚಿಸಲಾಯಿತು. ಕಾರ್ಯಕರ್ತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಗುತ್ತಿಗೆ ವಿಚಾರವಾಗಿ ಎಲ್ಲಾ ಕಾರ್ಯಕರ್ತರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದರು. ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ  ಎಸ್.ಎಂ.ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.