ADVERTISEMENT

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 7:25 IST
Last Updated 5 ಮಾರ್ಚ್ 2012, 7:25 IST

ಅರಸೀಕೆರೆ: ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಬೆಳೆ ಬೆಳೆಯಬೇಕು ಎಂದು ಮೂಡಿಗೆರೆ ತೋಟಗಾರಿಕೆ ಮಹಾ ವಿದ್ಯಾಲಯದ ಡಾ. ಕೆ.ಜಿ. ಪರಮೇಶ್ವರ್ ತಿಳಿಸಿದರು.

ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಹಾರನಹಳ್ಳಿ ಹೊಯ್ಸಳ ವೇದಿಕೆಯಲ್ಲಿ ಬಾಗಲಕೋಟೆ ತೋಟಗಾರಿಕಾ ಮಹಾ ವಿದ್ಯಾಲಯ, ಮೂಡಿಗೆರೆ ತೋಟಗಾರಿಕೆ ವಿಸ್ತರಣಾ ಘಟಕ ಹಾಗೂ ಹಾರನ ಹಳ್ಳಿ ಗ್ರಾಮ ಪಂಚಾಯಿತಿ ಅವರ ಸಂಯುಕ್ತಾಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ತೋಟಗಾರಿಕೆ ವಿಷಯಗಳ ವ್ಯಾಸಂಗ ಮಾಡುತ್ತಿರುವ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಅನುಭವ ಹಾಗೂ ತೋಟಗಾರಿಕಾ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಆರ್ಥಿಕತೆಯ ಸಿಂಹಪಾಲು ಕೃಷಿ ಕ್ಷೇತ್ರದ್ದಾಗಿದೆ ಎಂದರು.

 ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೃಷಿಕರು ಹಾಗೂ ಕೃಷಿ ವಿಜ್ಞಾನಿಗಳ ಪಾತ್ರ ಪ್ರಮುಖವಾಗಿದೆ. ಆಧುನಿಕ ಕೃಷಿ ಪದ್ದತಿಯಂತೆ ಹನಿ ನೀರಾವರಿ, ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಲಾಭದಾಯಕ ಬೆಳೆ ಬೆಳೆಯುವ ಚಿಂತನೆ ನಡೆಯುತ್ತಿದೆ ಎಂದರು.
 
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ಟಿ. ಶಿವಮೂರ್ತಿ, ತೋಟಗಾರಿಕೆ ಸಂಯೋಜಕ ಟಿ.ಪಿ. ಬಸವರಾಜು ಮಾತನಾಡಿದರು.

  ಗ್ರಾಮ ಪಂಚಾಯಿತಿ ಅಧ್ಯಕ್ಷ ಕರೀಂಸಾಬ್ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ ಸದಸ್ಯ ಬಿಳಿಚೌಡಯ್ಯ ಅವರು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ತಾ.ಪಂ ಇಒ ವಿದ್ಯಾರ್ಥಿಗಳಿಗೆ ಕೃಷಿ ವಸ್ತು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಓಂಕಾರಮೂರ್ತಿ, ಮಾಜಿ ಅಧ್ಯಕ್ಷ ಎಚ್.ಎಸ್. ನಂದೀಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್‌ಕುಮಾರ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.